ನವದೆಹಲಿ (ಪಿಟಿಐ): ‘ನನ್ನ ತಂದೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ನನ್ನ ಅಭಿಪ್ರಾಯವನ್ನು ಪಡೆದುಕೊಳ್ಳದೆ ವರದಿ ಪ್ರಸಾರ ಮಾಡಿದ ಸುದ್ದಿ ವಾಹಿನಿಗಳು ಹಾಗೂ ಟಿ.ವಿ ಪತ್ರಕರ್ತರು ಬೇಷರತ್ ಕ್ಷಮೆಯಾಚಿಸಬೇಕು’ ಎಂದು ಕೋರಿ ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಷೀದ್ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ಹಿಂದೆ ಸರಿದಿದ್ದಾರೆ.
‘ನನ್ನ ಅಭಿಪ್ರಾಯವನ್ನು ಪಡೆದುಕೊಳ್ಳದೆ, ವರದಿ ಪ್ರಸಾರ ಮಾಡುವ ಮೂಲಕ ನನ್ನ ಘನತೆಗೆ ಧಕ್ಕೆ ತರಲಾಗಿದೆ. ಜೊತೆಗೆ, ಸುದ್ದಿ ಸಂಸ್ಥೆಗಳು ನನ್ನನ್ನು ನಿಂದಿಸಿವೆ’ ಎಂದು ಸುದ್ದಿ ಪ್ರಚಾರ ಮತ್ತು ಡಿಜಿಟಲ್ ಮಾನದಂಡ ಪ್ರಾಧಿಕಾರಕ್ಕೆ ಶೆಹ್ಲಾ ಅವರು ದೂರು ನೀಡಿದ್ದರು. ಈ ರೀತಿಯ ಏಕ ಮುಖದ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಸುದ್ದಿ ಸಂಸ್ಥೆಗಳು ಕ್ಷಮೆ ಕೋರಬೇಕು ಎಂದು ನಿರ್ದೇಶಿಸಬೇಕು ಎಂದೂ ಶೆಹ್ಲಾ ಅವರು ತಮ್ಮ ದೂರಿನಲ್ಲಿ ಮನವಿ ಮಾಡಿದ್ದರು.
ಆದರೆ, ಶೆಹ್ಲಾ ಅವರ ಕುರಿತು ಇರುವ ಎಲ್ಲಾ ಸುದ್ದಿಗಳ ಲಿಂಕ್‌ಗಳನ್ನು ತೆಗೆದು ಹಾಕಬೇಕು ಎಂದು ಮಾತ್ರವೇ 2022 ಮಾರ್ಚ್ 31ರಂದು ಪ್ರಾಧಿಕಾರವು ಸುದ್ದಿ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಸುದ್ದಿಗಳು ಶೆಹ್ಲಾ ಅವರ ಕುರಿತು ಪೂರ್ವಾಗ್ರಹದಿಂದ ಕೂಡಿದೆ ಎಂದೂ ಹೇಳಿತ್ತು. ಆದರೆ, ಕ್ಷಮೆ ಕೇಳುವಂತೆ ಸುದ್ದಿ ಸಂಸ್ಥೆಗಳಿಗೆ ನಿರ್ದೇಶಿಸಲಿರಲಿಲ್ಲ. ಆದ್ದರಿಂದ ಪ್ರಾಧಿಕಾರದ ಆದೇಶವನ್ನು ಮಾರ್ಪಡಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಶೆಹ್ಲಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸುದ್ದಿ ಪ್ರಚಾರ ಮತ್ತು ಡಿಜಿಟಲ್ ಮಾನದಂಡ ಪ್ರಾಧಿಕಾರ (ಎನ್‌ಬಿಡಿಎಸ್‌ಎ), ಜೀ ನ್ಯೂಸ್ ಹಾಗೂ ಅದರ ನಿರೂಪಕ ಸುಧೀರ್ ಚೌಧರಿ ಅವರಿಗೆ ದೆಹಲಿ ಹೈಕೋರ್ಟ್ 2022ರ ಸೆ.16ರಂದು ನೋಟಿಸ್ ನೀಡಿತ್ತು. ಇದಕ್ಕೆ ಸುದ್ದಿ ಪ್ರಚಾರ ಮತ್ತು ಡಿಜಿಟಲ್ ಮಾನದಂಡ ಪ್ರಾಧಿಕಾರವು ಪ್ರತಿಕ್ರಿಯೆ ಸಲ್ಲಿಸಿದ್ದು, ಇನ್ನೂ ಕಾಲಾವಕಾಶ ನೀಡುವಂತೆ ಜೀ ನ್ಯೂಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.