ADVERTISEMENT

ರಿಯಾ ವಿರುದ್ಧದ ಲುಕೌಟ್‌ ಸುತ್ತೋಲೆ ರದ್ದು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 15:46 IST
Last Updated 22 ಫೆಬ್ರುವರಿ 2024, 15:46 IST
   

ಮುಂಬೈ: ಲುಕೌಟ್‌ ಸುತ್ತೋಲೆ ಹೊರಡಿಸುವುದಕ್ಕೆ ಎಫ್‌ಐಆರ್‌ ದಾಖಲಾಗಿರುವುದೊಂದೇ ಕಾರಣ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಹೊರಡಿಸಿದ್ದ ಲುಕೌಟ್‌ ಸುತ್ತೋಲೆಯನ್ನು (ಎಲ್‌ಒಸಿ) ಕೋರ್ಟ್‌ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಮಂಜೂಷಾ ದೇಶಪಾಂಡೆ ಅವರು ಇದ್ದ ವಿಭಾಗೀಯ ಪೀಠವು ರಿಯಾ, ಅವರ ಸಹೋದರ ಶೊವಿಕ್, ಪಾಲಕರಾದ ಇಂದ್ರಜಿತ್ ಹಾಗೂ ಸಂಧ್ಯಾ ಅವರು ಎಲ್‌ಒಸಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದೆ. 2020ರಲ್ಲಿ ಎಲ್‌ಒಸಿ ಹೊರಡಿಸಲಾಗಿತ್ತು.

ಅರ್ಜಿದಾರರು ತನಿಖೆಗೆ ಸಹಕರಿಸಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆದಾಗಲೆಲ್ಲ ಸಿಬಿಐ ಕಚೇರಿಗೆ ಹೋಗಿದ್ದಾರೆ, ಸಮನ್ಸ್‌ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಯಾವ ಪ್ರಯತ್ನವನ್ನೂ ನಡೆಸಿಲ್ಲ ಎಂದು ಕೋರ್ಟ್ ಹೇಳಿದೆ.

ADVERTISEMENT

‘ಎಫ್‌ಐಆರ್‌ ಉಲ್ಲೇಖಿಸುವುದು ಅಥವಾ ಎಫ್‌ಐಆರ್‌ನ ಸಾರಾಂಶವನ್ನು ಉಲ್ಲೇಖಿಸುವುದು ಎಲ್‌ಒಸಿ ಹೊರಡಿಸುವುದಕ್ಕೆ ಸಾಕಾಗುವುದಿಲ್ಲ’ ಎಂದು ಹೇಳಿದೆ. ತನಿಖೆಯ ಸಹಜ ಪ್ರಕ್ರಿಯೆಯಾಗಿ ಎಲ್‌ಒಸಿ ಹೊರಡಿಸುವಂತಿಲ್ಲ. ವ್ಯಕ್ತಿಯು ಉದ್ದೇಶಪೂರ್ವಕವಾಗಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದರೆ, ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದರೆ ಅಥವಾ ಇತರ ಕಾರಣಗಳಿಗಾಗಿ ಎಲ್‌ಒಸಿ ಹೊರಡಿಸಬಹುದು ಎಂದು ಪೀಠವು ವಿವರಿಸಿದೆ.

‘ಎಲ್‌ಒಸಿ ಎಂಬುದು ವ್ಯಕ್ತಿಯು ಶರಣಾಗುವಂತೆ ಮಾಡಲು ಇರುವ ಕಠಿಣ ಕ್ರಮ. ಹೀಗಾಗಿ ಇದು ವ್ಯಕ್ತಿಗೆ ಸಂವಿಧಾನದ 21ನೆಯ ವಿಧಿಯು ನೀಡಿರುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತದೆ’ ಎಂದು ಪೀಠವು ಹೇಳಿದೆ. ಎಲ್‌ಒಸಿ ಹೊರಡಿಸಲು ಇರುವ ಕಾರಣವನ್ನು ಉಲ್ಲೇಖಿಸಬೇಕು ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.