ADVERTISEMENT

ವರವರರಾವ್‌ಗೆ ತಾತ್ಕಾಲಿಕ ಜಾಮೀನು 3 ತಿಂಗಳು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 14:29 IST
Last Updated 13 ಏಪ್ರಿಲ್ 2022, 14:29 IST
ಕವಿ ವರವರಾ ರಾವ್
ಕವಿ ವರವರಾ ರಾವ್   

ಮುಂಬೈ: ಎಲ್ಗಾರ್‌ ಪರಿಷದ್–ಮಾವೊವಾದಿ ಪ್ರಕರಣದ ನಂಟು ಹೊಂದಿರುವ ಕವಿ, ಕಾರ್ಯಕರ್ತ ವರವರರಾವ್‌ ಅವರಿಗೆ ಶಾಶ್ವತವಾಗಿ ವೈದ್ಯಕೀಯ ಜಾಮೀನು ನೀಡಬೇಕೆಂಬ ಅರ್ಜಿಯನ್ನು ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌.ಬಿ. ಶುಕ್ರೆ ಮತ್ತು ಜಿ.ಎ. ಸನಪ್‌ ಅವರ ದ್ವಿಸದಸ್ಯ ಪೀಠ ವಜಾಗೊಳಿಸಿದೆ.

ಆದರೆ ಕಣ್ಣಿನ ಶಸ್ತ್ರ ಚಿಕಿತ್ಸೆಯ ಅಂಗವಾಗಿ ಅವರು ತಲೋಜಾ ಜೈಲಿನಲ್ಲಿ ಶರಣಾಗಲು 3 ತಿಂಗಳು ಕಾಲಾವಕಾಶ ನೀಡಿತು.

ಕಳೆದ ಫೆಬ್ರುವರಿಯಿಂದಲೂ ವರವರರಾವ್ ಅವರು ತಾತ್ಕಾಲಿಕ ವೈದ್ಯಕೀಯ ಜಾಮೀನಿನ ಅಡಿಯಲ್ಲಿ ಜೈಲಿನಿಂದ ಹೊರಗಡೆ ಇದ್ದಾರೆ.

ADVERTISEMENT

ಆರೋಪಿ ಪರ ವಕೀಲ ಆನಂದ್‌ ಗ್ರೋವರ್‌ ಅವರು, ‘ವರವರರಾವ್‌ ಅವರಿಗೆ ಶಾಶ್ವತವಾಗಿ ವೈದ್ಯಕೀಯ ಜಾಮೀನನ್ನು ನೀಡಬೇಕು. ತಲೋಜಾ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ಸಮರ್ಪಕ ನೈರ್ಮಲ್ಯ ಇಲ್ಲ. ವರವರರಾವ್ ಅವರಿಗೆ ಪಾರ್ಕಿನ್ಸನ್‌ ಕಾಯಿಲೆಯ ಆರಂಭಿಕ ಲಕ್ಷಣಗಳು ಕಂಡುಬಂದಿವೆ. ಅವರು ಹೈದರಾಬಾದ್‌ನನಿವಾಸದಲ್ಲಿ ವಾಸಿಸಲು ಅವಕಾಶ ಕೊಡಬೇಕು’ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿಗಳು ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ತಲೋಜಾ ಜೈಲಿನಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳಿಲ್ಲ ಎಂಬ ದೂರಿನ ಬಗ್ಗೆ ಏಪ್ರಿಲ್‌ 30ರೊಳಗೆ ವರದಿ ನೀಡಬೇಕು ಎಂದೂ ನ್ಯಾಯಮೂರ್ತಿಗಳು ಮಹಾರಾಷ್ಟ್ರ ಕಾರಾಗೃಹಗಳ ಮಹಾ ನಿರೀಕ್ಷಕರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.