ADVERTISEMENT

ದೆಹಲಿ ಪೊಲೀಸ್‌ ಆಯುಕ್ತರಾಗಿ ಆಸ್ತಾನ ನೇಮಕ: ಪ್ರತಿಕ್ರಿಯಿಸಲು ಕೇಂದ್ರಕ್ಕೆ ನೋಟಿಸ್

ಪಿಟಿಐ
Published 1 ಸೆಪ್ಟೆಂಬರ್ 2021, 9:54 IST
Last Updated 1 ಸೆಪ್ಟೆಂಬರ್ 2021, 9:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿಯ ಪೊಲೀಸ್ ಆಯುಕ್ತರನ್ನಾಗಿ ಗುಜರಾತ್‌ ಕೇಡರ್‌ನ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು, ತಮ್ಮ ನಿಲುವನ್ನು ತಿಳಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಕೇಶ್ ಆಸ್ತಾನ ಅವರನ್ನು ದೆಹಲಿ ಹೈಕೋರ್ಟ್‌ ಕೇಳಿದೆ.

ಆಸ್ತಾನ ನೇಮಕ ಪ್ರಶ್ನಿಸಿ ಸಾದ್ರೆ ಆಲ್ಮ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ, ಪಿಐಎಲ್‌ ಬಗೆಗಿನ ನಿಲುವನ್ನು ತಿಳಿಸುವಂತೆ ಕೇಂದ್ರ ಮತ್ತು ಆಸ್ತಾನ ಅವರಿಗೆ ನೋಟಿಸ್‌ ನೀಡಿ, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.

ನೇಮಕ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸೆಂಟರ್‌ ಫಾರ್ ಪಬ್ಲಿಕ್ ಇಂಟರೆಸ್ಟ್‌ ಲಿಟಿಗೇಷನ್‌ (ಸಿಪಿಐಎಲ್‌) ಸ್ವಯಂ ಸೇವಾ ಸಂಸ್ಥೆಯ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಪ್ರಶಾಂತ್ ಭೂಷಣ್, ‘ಆಲ್ಮ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ, ಈ ಹಿಂದೆ ಇದೇ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ತಮ್ಮ ಅರ್ಜಿಯ ನಕಲಾಗಿದೆ ಎಂದು ವಾದ ಮಂಡಿಸಿದರು.

ADVERTISEMENT

ಕೇಂದ್ರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿ, ಇದಕ್ಕೆ ಪ್ರತಿಕ್ರಿಯಿಸಲು ಸಮಯ ಕೋರಿದರು. ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಈ ಪಿಐಎಲ್‌,ಇದೇ ವಿಷಯವಾಗಿ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯ ನಕಲು ಆಗಿದೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಆಲ್ಮ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ದೆಹಲಿ ಪೊಲೀಸ್ ಆಯುಕ್ತರಾಗಿ ಆಸ್ತಾನ ಅವರನ್ನು ನೇಮಿಸಿ ಜುಲೈ 27ರಂದು ಗೃಹ ಸಚಿವಾಲಯ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು. ಹಾಗೆಯೇ ಆಂತರಿಕವಾಗಿ ನಿಯೋಜನೆ ಮಾಡಲು ಹಾಗೂ ಸೇವಾ ಅವಧಿ ವಿಸ್ತರಿಸುವಂತೆ ಆದೇಶಿಸಲು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.