ADVERTISEMENT

ವೃದ್ಧರಲ್ಲಿ ಅಧಿಕ ಮರೆವು: 11 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 16:19 IST
Last Updated 25 ಜನವರಿ 2023, 16:19 IST

ನವದೆಹಲಿ: ‘ವೃದ್ಧರಲ್ಲಿನ ಮರೆವಿನ ಕಾಯಿಲೆಯು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು ವರದಿಯಾಗಿರುವ ದೇಶದ 11 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದೆ’ ಎಂದು ಅಧ್ಯಯನವೊಂದು ತಿಳಿಸಿದೆ.

ಅಂತರರಾಷ್ಟ್ರೀಯ ತಂಡವೊಂದು ಇದೇ ಮೊದಲ ಬಾರಿಗೆ ದೇಶದಾದ್ಯಂತ ಅಧ್ಯಯನ ಕೈಗೊಂಡಿತ್ತು. 60 ವರ್ಷ ಮೇಲ್ಪಟ್ಟವರ ಪೈಕಿ ಅಂದಾಜು 88 ಲಕ್ಷ ಮಂದಿಯಲ್ಲಿ ಸ್ಮರಣ ಶಕ್ತಿ ಕ್ಷೀಣಿಸಿರುವುದು ಇದರಿಂದ ದೃಢಪಟ್ಟಿತ್ತು.

ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರ ರಾಷ್ಟ್ರೀಯ ಸರಾಸರಿ ಪ್ರಮಾಣವು ಶೇ 7.4ರಷ್ಟಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ 7.61ರಷ್ಟು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರವು (ಶೇ 11.04) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಡಿಶಾ (ಶೇ 9.87), ಪಶ್ಚಿಮ ಬಂಗಾಳ (ಶೇ 9.23), ಅಸ್ಸಾಂ (ಶೇ 8.47), ಹಿಮಾಚಲ ಪ್ರದೇಶ (ಶೇ 8.43), ಕೇರಳ (ಶೇ 8.27), ತೆಲಂಗಾಣ (ಶೇ 8.27), ಉತ್ತರಪ್ರದೇಶ (ಶೇ 7.92), ಆಂಧ್ರಪ್ರದೇಶ (ಶೇ 7.74) ಹಾಗೂ ಮಹಾರಾಷ್ಟ್ರ (ಶೇ 7.61) ಕೂಡ ಈ ಪಟ್ಟಿಯಲ್ಲಿವೆ. ದೆಹಲಿಯಲ್ಲಿ ಈ ಪ್ರಮಾಣವು ಅತಿ ಕಡಿಮೆ (ಶೇ 4.5) ವರದಿಯಾಗಿದೆ.

ADVERTISEMENT

2010ರಲ್ಲಿ ದೇಶದಲ್ಲಿ ಅಂದಾಜು 37 ಲಕ್ಷ ಮಂದಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಖ್ಯೆಯು ಗಣನೀಯವಾಗಿ ಏರಿಕೆ ಯಾಗಿರುವುದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. ಪುರುಷರಿಗಿಂತಲೂ ಮಹಿಳೆಯರಲ್ಲಿ, ನಗರಗಳಿಗಿಂತಲೂ ಗ್ರಾಮೀಣ ಪ್ರದೇಶದ ವೃದ್ಧರಲ್ಲೇ ಹೆಚ್ಚು ಸ್ಮರಣಶಕ್ತಿ ಕುಗ್ಗಿರುವುದೂ ಅಧ್ಯಯನದಿಂದ ಬಹಿರಂಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.