ADVERTISEMENT

ಕೇರಳದಲ್ಲಿ ಭಾರಿ ಮಳೆ | ಐವರು ಸಾವು; 8 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:43 IST
Last Updated 30 ಮೇ 2025, 14:43 IST
ಕೇರಳದಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, ಕೊಚ್ಚಿ ಪಟ್ಟಣದಲ್ಲಿ ಜಲಾವೃತಗೊಂಡಿದ್ದ ರಸ್ತೆಯಲ್ಲೇ ವಾಹನ ಸವಾರರು ಸಾಗಿದರು–ಪಿಟಿಐ ಚಿತ್ರ
ಕೇರಳದಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, ಕೊಚ್ಚಿ ಪಟ್ಟಣದಲ್ಲಿ ಜಲಾವೃತಗೊಂಡಿದ್ದ ರಸ್ತೆಯಲ್ಲೇ ವಾಹನ ಸವಾರರು ಸಾಗಿದರು–ಪಿಟಿಐ ಚಿತ್ರ   

ತಿರುವನಂತಪುರ/ ತ್ರಿಶ್ಯೂರ್‌: ಕೇರಳದಲ್ಲಿ ಶುಕ್ರವಾರವೂ ಭಾರಿ ಮಳೆಯಾಗಿದ್ದು, ರಾಜ್ಯದ ವಿವಿಧೆಡೆ ಐವರು ಮೃತಪಟ್ಟಿದ್ದಾರೆ. ಹಲವು ತಗ್ಗುಪ್ರದೇಶಗಳು ಮುಳುಗಡೆಯಾಗಿದ್ದು, ಬಿರುಗಾಳಿ, ಸಮುದ್ರದಲ್ಲಿ ಹೆಚ್ಚಿದ ಉಬ್ಬರದಿಂದ ಹಲವು ಮನೆಗಳಿಗೆ ಹಾನಿಯಾಗಿವೆ.  

ಕೊಟ್ಟಾಯಂನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಿರುವನಂತಪುರದಲ್ಲಿ ಭಾರೀ ಅಲೆಗೆ ಸಿಲುಕಿ ದೋಣಿ ಮಗುಚಿಬಿದ್ದು, ಮೀನುಗಾರರೊಬ್ಬರು ಸಾವಿಗೀಡಾಗಿದ್ದರೆ. ಕೊಚ್ಚಿಯಲ್ಲಿ 85 ವರ್ಷದ ನರೇಗಾ ಕಾರ್ಮಿಕ ಮಹಿಳೆ ಕುಸಿದು ಮೃತಪಟ್ಟರೆ, ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. 

ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶ್ಯೂರ್‌, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು (ಐಎಂಡಿ) ‘ರೆಡ್‌ ಆಲರ್ಟ್‌’, ಉಳಿದಂತೆ ಆರು ಜಿಲ್ಲೆಗಳಿಗೆ ‘ಆರೆಂಜ್‌ ಆಲರ್ಟ್‌’ ಘೋಷಿಸಿದೆ.  

ADVERTISEMENT

‘ಭಾರಿ ಮಳೆಯಿಂದ ರಾಜ್ಯದಾದ್ಯಂತ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಜನರು ಎಚ್ಚರದಿಂದ ಇರಬೇಕು’ ಎಂದು ರಾಜ್ಯ ಕಂದಾಯ ಸಚಿವ ಕೆ.ರಾಜನ್‌ ಹೇಳಿಕೆ ನೀಡಿದ್ದಾರೆ.

‘ವೇಗವಾಗಿ ಗಾಳಿ ಬೀಸುತ್ತಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಭಾರಿ ಮಳೆ ಮುಂದುವರಿಯಲಿದೆ. ಗುಡ್ಡಗಾಡು ಪ್ರದೇಶಗಳಿಗೆ ಅನಗತ್ಯ ಪ್ರವಾಸ ಕೈಗೊಳ್ಳಬಾರದು’ ಎಂದು ಜನರಿಗೆ ಸಲಹೆ ನೀಡಿದ್ದಾರೆ.

ನಿರಾಶ್ರಿತ ಶಿಬಿರಗಳ ಸ್ಥಾಪನೆ:

‘ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ 1,894 ಮಂದಿಗೆ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ರಾಜ್ಯದಾದ್ಯಂತ ನಾಲ್ಕು ಸಾವಿರ ಶಿಬಿರಗಳನ್ನು ತೆರೆಯಲು ವ್ಯವಸ್ಥೆ ಮಾಡಿದ್ದು, 6 ಲಕ್ಷ ಮಂದಿಗೆ ಆಶ್ರಯ ಕಲ್ಪಿಸಬಹುದು. ಮಳೆಯಿಂದ ರಾಜ್ಯದಾದ್ಯಂತ ನೂರಾರು ಮನೆಗಳಿಗೆ ಹಾನಿಯಾಗಿದೆ’ ಎಂದು ರಾಜನ್‌ ತಿಳಿಸಿದರು.

ಪ್ರತಿಕೂಕ ಹವಾಮಾನದಿಂದ ತಿರುವನಂತಪುರದ ಕೋವಲಂ ಬೀಚ್‌ನಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು ತಟದಲ್ಲಿ ಲಂಗರು ಹಾಕಿದ ದೋಣಿಗಳು–ಪಿಟಿಐ ಚಿತ್ರ
ಮೇ30ರಿಂದ ಜೂನ್‌5ರವರೆಗೆ ಮಾಮೂಲಿಗಿಂತಲೂ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದ್ದು ಜನರು ಎಚ್ಚರದಿಂದ ಇರಬೇಕು
ಕೆ.ರಾಜನ್‌ ಕಂದಾಯ ಸಚಿವ, ಕೇರಳ

ಮಳೆ ಅನಾಹುತ; ಸರ್ಕಾರದಿಂದ ಕ್ರಮ

  • ಭಾರಿ ಮಳೆಗೆ ಬುಡಸಮೇತ ಉರುಳಿಬಿದ್ದ ವಿದ್ಯುತ್‌ ಕಂಬ ಮರಗಳು

  • ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು– ವಿದ್ಯುತ್‌ ವ್ಯತ್ಯಯ

  • ಕೊಟ್ಟಾಯಂ ಜಿಲ್ಲೆಯ ಶಾಲೆಗಳಿಗೆ ಶನಿವಾರ ರಜೆ

  • ಮಂಗಳೂರು– ತಿರುವನಂತಪುರ ಸೇರಿದಂತೆ ಹಲವು ರೈಲುಗಳ ಮಾರ್ಗ ಬದಲಾವಣೆ

  • ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ

  • ಮುಂಗಾರು ಸಿದ್ಧತೆ ಪರಿಹಾರಕ್ಕೆ ತಲಾ ₹1 ಕೋಟಿ ಬಿಡುಗಡೆ

  • ತಿರುವನಂತಪುರ ಕೋಯಿಕ್ಕೋಡ್‌ ಜಿಲ್ಲೆಗೆ ಹೆಚ್ಚುವರಿಯಾಗಿ ತಲಾ ₹2 ಕೋಟಿ

  • ಪತ್ತನಂತಿಟ್ಟ ಜಿಲ್ಲೆಯಲ್ಲಿ 200 ಮನೆಗಳಿಗೆ ಹಾನಿ

  • ಶನಿವಾರದವರೆಗೂ ಸಮುದ್ರಗಳಲ್ಲಿ ಭಾರಿ ಅಲೆಯ ಸಾಧ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.