ADVERTISEMENT

ಪೂಂಚ್‌ನಲ್ಲಿ ಪಾಕ್‌ ಗುಂಡಿನ ದಾಳಿ: 12 ಸಾವು, 50 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಮೇ 2025, 16:19 IST
Last Updated 7 ಮೇ 2025, 16:19 IST
ಪಾಕಿಸ್ತಾನದ ದಾಳಿಯಿಂದಾಗಿ ಪೂಂಚ್‌ನ ಮೆಂದರ್‌ನಲ್ಲಿ ಮನೆ ಹಾನಿಗೊಳಗಾಗಿದೆ.
ಪಾಕಿಸ್ತಾನದ ದಾಳಿಯಿಂದಾಗಿ ಪೂಂಚ್‌ನ ಮೆಂದರ್‌ನಲ್ಲಿ ಮನೆ ಹಾನಿಗೊಳಗಾಗಿದೆ.   

ಪೂಂಚ್‌: ಜಮ್ಮು–ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ಭಾಗಗಳಲ್ಲಿ ಪಾಕಿಸ್ತಾನದ ಸೇನಾ ಪಡೆಯು ಬುಧವಾರ ತೀವ್ರ ಗುಂಡಿನದಾಳಿ ನಡೆಸಿದೆ. ಘಟನೆಯಲ್ಲಿ 12 ನಾಗರಿಕರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ 4 ಮಕ್ಕಳು, ಇಬ್ಬರು ಮಹಿಳೆಯರೂ ಇದ್ದಾರೆ.

ಬುಧವಾರ ನಸುಕಿನಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ (ಪಿಒಕೆ) ಭಯೋತ್ಪಾದಕ ನೆಲೆಗಳನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿದ್ದವು. ಇದರ ಬೆನ್ನಲ್ಲೇ ಜಮ್ಮು–ಕಾಶ್ಮೀರ ಗಡಿ ಜಿಲ್ಲೆಗಳಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಶುರುವಾಗಿದೆ.

ಪೂಂಚ್‌ ಮಾತ್ರವಲ್ಲದೆ ರಜೌರಿ ಜಿಲ್ಲೆ ಹಾಗೂ ಕುಪ್ವಾಡ ಜಿಲ್ಲೆಯ ಉರಿ, ಕರ್ನಾಹ್‌, ತಂಗಧರ್ ಸೆಕ್ಟರ್‌ಗಳಲ್ಲಿಯೂ ತೀವ್ರ ಗುಂಡಿನ ದಾಳಿ ನಡೆದಿದೆ. ಫಿರಂಗಿಗಳನ್ನು ಬಳಸಿಯೂ ದಾಳಿ ನಡೆಸಲಾಗಿದ್ದು, ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿ ಹಲವಾರು ಮನೆಗಳು ಹಾನಿಗೊಂಡಿವೆ. ‍ಪೂಂಚ್‌ನಲ್ಲಿರುವ ಅರಣ್ಯ ಇಲಾಖೆ ಹಾಗೂ ವಿಶ್ವಸಂಸ್ಥೆ ಕೇಂದ್ರ ಕಟ್ಟಡಗಳಿಗೆ ಹಾನಿಯಾಗಿದೆ.

ADVERTISEMENT

ಢಾಕಿ ಗ್ರಾಮದಲ್ಲಿ 150ಕ್ಕೂ ಅಧಿಕ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ತಿರುಗೇಟು ನೀಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜತೆಗೆ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವುದು ಶೂರತ್ವವಲ್ಲ, ಹೇಡಿ ಕೃತ್ಯ ಎಂದೂ ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ. 

ನಾಲ್ವರು ಸಿಖ್ಖರ ಸಾವು:

ಪಾಕಿಸ್ತಾನಿ ಪಡೆಗಳು ನಡೆಸಿದ ದಾಳಿಯಲ್ಲಿ ಪೂಂಚ್‌ ಸೆಕ್ಟರ್‌ನಲ್ಲಿದ್ದ ಗುರದ್ವಾರ ಸಾಹಿಬ್‌ ಕೂಡ ಹಾನಿಗೊಳಗಾಗಿದೆ. ಘಟನೆಯಲ್ಲಿ 4 ಮಂದಿ ಸಿಖ್ಖರು ಮೃತಪಟ್ಟಿದ್ದಾರೆ. ಮೃತರನ್ನು ಭಜ್‌ ಅಮ್ರಿಕ್‌ ಸಿಂಗ್‌, ಅಮರಜಿತ್‌ ಸಿಂಗ್, ರಂಜಿತ್‌ ಸಿಂಗ್‌, ರುಬಿ ಕೌರ್‌ ಎಂದು ಗುರುತಿಸಲಾಗಿದೆ. ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಈ ಘಟನೆಯನ್ನು ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.