ADVERTISEMENT

ಮುಂದುವರಿದ ಮಳೆ: ಅಹಮದಾಬಾದ್‌ನಲ್ಲಿ ಕಾಂಪೌಂಡ್‌ ಕುಸಿದು ಮೂವರ ಮರಣ

ಪಿಟಿಐ
Published 14 ಜುಲೈ 2022, 16:16 IST
Last Updated 14 ಜುಲೈ 2022, 16:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಅಹಮದಾಬಾದ್‌/ಹೈದರಾಬಾದ್‌/ಮುಂಬೈ/ಪುಣೆ: ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ ಹಾಗೂ ಕೇರಳದಲ್ಲಿ ಮಳೆ ಮುಂದುವರಿದಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಹಲವರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ರಸ್ತೆಗಳು ಜಲಾವೃತಗೊಂಡಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಅಹಮದಾಬಾದ್‌ನ ಹೊರವಲಯದಲ್ಲಿರುವ ಒಗ್ನಾಜ್‌ ಪ್ರದೇಶದಲ್ಲಿ ಫಾರ್ಮ್‌ಹೌಸ್‌ವೊಂದರ ಕಾಂಪೌಂಡ್‌ಶೆಡ್‌ ಮೇಲೆ ಕುಸಿದುಬಿದ್ದಿದ್ದರಿಂದ ಮೂವರು ಮೃತಪಟ್ಟಿದ್ದಾರೆ.

‘ಮೃತರನ್ನು ಶೀತಲ್‌ ಥಂಗಾ (16), ವನಿತಾ ಮಿಥಿಯಾ (19) ಹಾಗೂ ಅಸ್ಮಿತಾ ಸಗೋದ್‌ (22) ಎಂದು ಗುರುತಿಸಲಾಗಿದೆ. ರಿಂಕು ಮಿಥಿಯಾ (19) ಮತ್ತು ಕವಿತಾ ಥಂಗಾ (35) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ತೆಲಂಗಾಣದ ಕುಮುರಂ ಭೀಮ್‌ ಆಸೀಫಾಬಾದ್‌ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ.

‘ಪ್ರವಾಹ ಪ್ರದೇಶದಲ್ಲಿ ಸಿಲುಕಿದ್ದಗರ್ಭಿಣಿಯೊಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವಾಗಸಿಂಗರೇನಿ ಕೊಲಿಯೆರಿಸ್‌ ಕಂಪನಿಯ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಬ್ಬರ ಮೃತದೇಹ ಪತ್ತೆಯಾಗಿವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತೆಲಂಗಾಣದಲ್ಲಿ 19 ಸಾವಿರಕ್ಕೂ ಅಧಿಕ ಮಂದಿಯನ್ನುಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ.

ಮಹಾರಾಷ್ಟ್ರದ ನಾಗಪುರದ ಗಡಚಿರೌಲಿ ಜಿಲ್ಲೆಯ ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. 29 ಗ್ರಾಮಗಳಿಂದ 3 ಸಾವಿರಕ್ಕೂ ಅಧಿಕ ನಾಗರಿಕರನ್ನು ಸ್ಥಳಾಂತರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಥಿಲ್ಲು–ಕಲದ್‌ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಮೊಹಮ್ಮದ್‌ ಶಫಿ (65) ಹಾಗೂ ಅವರ ಮಗ ಅಬ್ದುಲ್‌ ರಶೀದ್‌ (30) ಮೃತಪಟ್ಟಿದ್ದಾರೆ.

*ಮಳೆಯಿಂದಾಗಿ ಊಟಿಯ ಹಲವೆಡೆ ಮರಗಳು ಉರುಳಿ ಸಂಚಾರ ಅಸ್ತವ್ಯಸ್ತ. ಚಳಿಯ ವಾತಾವರಣ ಸೃಷ್ಟಿ.

*ಮಹಾರಾಷ್ಟ್ರದ ತಾನ್ಸಾ ಜಲಾಶಯ ಭರ್ತಿ.

*ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಭಾರಿ ಮಳೆ. ಮುಂಬೈ–ಅಹಮದಾಬಾದ್‌ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ.

*ಕೇರಳದ ಕಾಸರಗೋಡು, ಕೊಯಿಕ್ಕೋಡ್‌ ಮತ್ತು ವಯನಾಡು ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ. ಸಂತ್ರಸ್ತರ ಸ್ಥಳಾಂತರ.

*ಪುಣೆಯಲ್ಲಿ ವಸತಿ ಸಂಕೀರ್ಣ ಕುಸಿತ. ಮೂರು ಮನೆಗಳಲ್ಲಿದ್ದ 11 ಮಂದಿಯ ರಕ್ಷಣೆ.

*ರಾಜಸ್ಥಾನದ ವಿವಿಧೆಡೆಯೂ ಧಾರಾಕಾರ ಮಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.