ADVERTISEMENT

ಕೇರಳದಲ್ಲಿ ಭಾರಿ ಮಳೆ: ಹೆಚ್ಚಿನ ನಿಗಾ

ಪಿಟಿಐ
Published 14 ಮೇ 2021, 18:29 IST
Last Updated 14 ಮೇ 2021, 18:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಅಲ್ಲಿನ ಸರ್ಕಾರ ಕಟ್ಟೆಚ್ಚರವಹಿಸಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಶುಕ್ರವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಅಲ್ಲದೆ ಪರಿಹಾರ ಶಿಬಿರಗಳನ್ನೂ ತೆರೆದಿದೆ.

ರಾಜ್ಯದ ಹಲವು ಭಾಗಗಳಲ್ಲಿ ಗುರುವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜಧಾನಿ ತಿರುವನಂತರಪುರದ ಕರಮಣ ಮತ್ತು ಕಿಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಅರುವಿಕ್ಕರ ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿದ್ದರಿಂದ ಅದರ ಗೇಟುಗಳನ್ನು ತೆರೆಯಾಗಿದೆ.

ADVERTISEMENT

ಈ ನದಿಗಳ ಬದಿಯಲ್ಲಿ ವಾಸಿಸುತ್ತಿರುವ ಹಲವರನ್ನು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಮತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಾತ್ರಿ ಮಳೆಯಿಂದಾಗಿ ದಕ್ಷಿಣ ಕೊಲ್ಲಂ ಜಿಲ್ಲೆಯ ಅನೇಕ ಭಾಗಗಳಲ್ಲಿ ಮರಗಳು ಬುಡಮೇಲಾಗಿವೆ.

ಸಮುದ್ರದಲ್ಲಿ ಗುರುವಾರ ರಾತ್ರಿಯಿಂದ ಹೆಚ್ಚಿನ ಅಲೆಗಳು ಬರುತ್ತಿದ್ದು, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ ಜಿಲ್ಲೆಗಳ ಕರಾವಳಿಯ ಹಲವು ಮನೆಗಳಿಗೆ ಹಾನಿ ಮಾಡಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಒಂಬತ್ತು ತಂಡಗಳು ಕೇರಳಕ್ಕೆ ಬಂದಿವೆ.

ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ 3071 ಕಟ್ಟಡಗಳನ್ನು ಪರಿಹಾರ ಶಿಬಿರಗಳಿಗೆ ಗುರುತಿಸಲಾಗಿದೆ. ಇವುಗಳಲ್ಲಿ ಸುಮಾರು 4.23 ಲಕ್ಷ ಮಂದಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಆದರೆ, ಕೋವಿಡ್‌–19 ಕಾರಣಕ್ಕೆ ಜನರು ಈ ಸ್ಥಳಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 31ಕ್ಕೆ ಕೇರಳಕ್ಕೆ ಮುಂಗಾರು
ನವದೆಹಲಿ (ಪಿಟಿಐ):
ಕೇರಳಕ್ಕೆ ನೈಋತ್ಯ ಮುಂಗಾರು ಮೇ 31ಕ್ಕೆ ಆಗಮಿಸುವ ಸಾಧ್ಯತೆ ಇದೆ. ಇದು ಸಾಮಾನ್ಯ ದಿನಕ್ಕಿಂತಲೂ ಒಂದು ದಿನ ಮೊದಲು ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.