ADVERTISEMENT

ಮುಂಬೈನಲ್ಲಿ ಜೂ. 13, 14ರಂದು ಭಾರಿ ಮಳೆ ಸಾಧ್ಯತೆ; ಹೈಅಲರ್ಟ್‌ ಘೋಷಣೆ

ಪಿಟಿಐ
Published 12 ಜೂನ್ 2021, 6:14 IST
Last Updated 12 ಜೂನ್ 2021, 6:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈನಲ್ಲಿ ಇದೇ 13 ಮತ್ತು 14ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

‘ನಿಯಂತ್ರಣ ಕೊಠಡಿಗಳು, ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಏಜೆನ್ಸಿಗಳಿಗೆ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ಬೆಸ್ಟ್‌, ಅದಾನಿ ಸೇರಿದಂತೆ ವಿದ್ಯುತ್‌ ಪೂರೈಸುವ ಸಂಸ್ಥೆಗಳು, ಕರಾವಳಿ ಕಾವಲು ಪಡೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್‌ಗಳಿಗೂ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ’ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದರು.

‘ಆರು ಕಂಟ್ರೋಲ್‌ ರೂಂಗಳಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಯಿರುವ ನಗರದ ಹಲವು ಭಾಗಗಳಲ್ಲಿ ಪಂಪಿಂಗ್‌ ಕೇಂದ್ರಗಳನ್ನು ಅಳವಡಿಸಲಾಗಿದೆ. ಸಮುದ್ರ ತೀರಗಳಿಗೆ ಭೇಟಿ ನೀಡದಂತೆ ಜನರಿಗೆ ಸೂಚಿಸಲಾಗಿದೆ. 24 ವಾರ್ಡ್‌ಗಳಲ್ಲಿರುವ ಪಾಲಿಕೆಯ ಶಾಲೆಗಳಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಬಿಎಂಸಿ ಪ್ರಕರಣೆ ತಿಳಿಸಿದೆ.

ADVERTISEMENT

‘ಕ್ರಾಂತಿ ನಗರದ ಬಳಿಯಿರುವ ಮಿಠಿ ನದಿಯ ದಡದಲ್ಲಿ ಎನ್‌ಡಿಆರ್‌ಎಫ್‌ ತಂಡವನ್ನು ನಿಯೋಜನೆ ಮಾಡಲಾಗಿದೆ. ಒಂದು ವೇಳೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಇದಕ್ಕೆ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.