ADVERTISEMENT

ತಿರುಪತಿಯಲ್ಲಿ ಭಾರಿ ಮಳೆ: ದೇವಸ್ಥಾನದ ಮಾರ್ಗಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 19:00 IST
Last Updated 18 ನವೆಂಬರ್ 2021, 19:00 IST
ಭಾರಿ ಮಳೆಯ ಕಾರಣ ಜಲಾವೃತವಾಗಿದ್ದ ಪುದುಚೇರಿಯ ರೈನ್‌ಬೋ ನಗರದ ರಸ್ತೆಯೊಂದರಲ್ಲಿ ಗುರುವಾರ ಅಗತ್ಯ ವಸ್ತುಗಳನ್ನು ಹೊತ್ತೊಯ್ದ ಜನರು       –ಪಿಟಿಐ ಚಿತ್ರ
ಭಾರಿ ಮಳೆಯ ಕಾರಣ ಜಲಾವೃತವಾಗಿದ್ದ ಪುದುಚೇರಿಯ ರೈನ್‌ಬೋ ನಗರದ ರಸ್ತೆಯೊಂದರಲ್ಲಿ ಗುರುವಾರ ಅಗತ್ಯ ವಸ್ತುಗಳನ್ನು ಹೊತ್ತೊಯ್ದ ಜನರು       –ಪಿಟಿಐ ಚಿತ್ರ   

ಹೈದರಾಬಾದ್‌: ತಿರುಪತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ, ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ತೆರಳುವ ಎರಡೂ ಪಾದಚಾರಿ ಮಾರ್ಗಗಳನ್ನು ಬಂದ್‌ ಮಾಡಲಾಗಿದೆ. ಮುಂದಿನ ಆದೇಶದ ವರೆಗೂ ಈ ನಿಯಮ ಜಾರಿಯಲ್ಲಿ ಇರಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪೂರ್ವ ಕರಾವಳಿ ತೀರಗಳ ಹತ್ತಿರಕ್ಕೆ ಸಾಗುತ್ತಿರುವ ಕಾರಣ ನಲ್ಲೂರು, ಚಿತ್ತೂರು ಮತ್ತು ಕಡಪ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ. ಈ ಭಾಗದಲ್ಲಿ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಯಿಂದ ತಿರುಪತಿಯಲ್ಲಿ ಜನ ಜೀವನಕ್ಕೂ ಅಡ್ಡಿ ಉಂಟಾಗಿದೆ. ಮಳೆಯಿಂದಾಗಿ ಯಾತ್ರಿಕರೂ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ADVERTISEMENT

ವೆಂಕಟೇಶ್ವರ ದೇವಸ್ಥಾನಕ್ಕೆ ಸಾಗುವ ರಸ್ತೆಗಳ ಮೇಲೆ ಬಿದ್ದಿರುವ ಬಂಡೆ ಮತ್ತು ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ವೈಕುಂಟಂನ ಸರದಿ ಸಾಲಿನ ಜಾಗದಲ್ಲೂ ಮಳೆ ನೀರು ನಿಂತಿದೆ. ತಿರುಪತಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಕಾರ್ತಿಕ ದೀಪೋತ್ಸವವನ್ನು ಮುಂದೂಡುವ ನಿರ್ಧಾರವನ್ನೂ ದೇವಸ್ಥಾನ ಮಂಡಳಿ ತೆಗೆದುಕೊಂಡಿದೆ.

ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣ ಕೂಡಾ ಜಲಾವೃತವಾಗಿದ್ದು, ಇಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಬೆಂಗಳೂರು ಮತ್ತು ಹೈದರಾಬಾದಿನ ಕಡೆ ತಿರುಗಿಸಲಾಯಿತು. ತಗ್ಗು ಪ್ರದೇಶದ ಹಲವು ಪ್ರದೇಶಗಳು, ಕೊಳೆಗೇರಿಗಳು ಜಲಾವೃತಗೊಂಡಿವೆ.

ಚಿತ್ತೂರು ಜಿಲ್ಲಾ ಆಡಳಿತವು ಶಾಲಾ ಕಾಲೇಜುಗಳಿಗೆಗುರುವಾರ ಮತ್ತು ಶುಕ್ರವಾರ ರಜೆ ಘೋಷಿಸಿದೆ. ವಿಪತ್ತು ನಿರ್ವಹಣಾ ತಂಡಗಳನ್ನು ಸಿದ್ಧವಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.