ಮಳೆ
(ಪ್ರಾತಿನಿಧಿಕ ಚಿತ್ರ)
ತಿರುವನಂತಪುರ: ಕೇರಳದಾದ್ಯಂತ ಭಾರಿ ಮಳೆ ಮುಂದುವರಿಯವ ಸಾಧ್ಯತೆಯಿದ್ದು, ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಕೆಲವು ದಿನಗಳವರೆಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.
ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಇಂದು (ಶನಿವಾರ) ರೆಡ್ ಅಲರ್ಟ್ ಮತ್ತು ಉಳಿದ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಭಾನುವಾರ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಸೋಮವಾರ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹಿಂದೆ ಐಎಂಡಿ ಹೇಳಿತ್ತು. ಅದಕ್ಕೂ ಮೂರು ದಿನ ಮೊದಲೇ ಮುಂಗಾರು ಪ್ರವೇಶವಾಗಿದೆ ಎಂದು ಇಲಾಖೆ ಇಂದು ತಿಳಿಸಿದೆ.
ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1ರ ವೇಳೆಗೆ ಕೇರಳಕ್ಕೆ ಪ್ರವೇಶಿಸುತ್ತವೆ. 2009ರ ನಂತರ, ವಾಡಿಕೆಗಿಂತಲೂ ಮುಂಚಿತವಾಗಿ ಭಾರತದ ಮುಖ್ಯಭಾಗದಲ್ಲಿ ಮುಂಗಾರು ಪ್ರವೇಶಿಸಿರುವುದು ಇದೇ ಮೊದಲು (2009ರಲ್ಲಿ ಮೇ 23ರಂದು ಮುಂಗಾರು ಪ್ರವೇಶಿಸಿತ್ತು) ಎಂದು ಐಎಂಡಿ ತಿಳಿಸಿದೆ.
ಶುಕ್ರವಾರ-ಶನಿವಾರದ ಮಧ್ಯರಾತ್ರಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಭಾರಿ ಮಳೆ, ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲವು ಮನೆಗಳಿಗೆ ಹಾನಿಯುಂಟಾಗಿದೆ. ಬೆಳೆಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಇದು ರಾಜ್ಯದಲ್ಲಿ ಮುಂಗಾರು ಮಳೆ ಆರಂಭವನ್ನು ಸೂಚಿಸುತ್ತದೆ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ಹೇಳಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ರಾಜ್ಯದ ಹಲವು ಭಾಗಗಳಲ್ಲಿ ಬೀಸಿದ ಬಲವಾದ ಗಾಳಿಯು ಮಾನ್ಸೂನ್ ಗಾಳಿಯ ಸ್ವರೂಪದ್ದಾಗಿ ಕಂಡುಬಂದಿದೆ ಎಂದೂ ಅವರು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.