ADVERTISEMENT

ವಿಚಾರಣೆಗೆ ಹಾಜರಾಗದ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಹೈಕೋರ್ಟ್ ಕೆಂಡಾಮಂಡಲ

ಬಂಧನದ ಆದೇಶ ಹೊರಡಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 9:47 IST
Last Updated 23 ಫೆಬ್ರುವರಿ 2024, 9:47 IST
<div class="paragraphs"><p>ಮಾಜಿ ಸಚಿವ ಶ್ರೀರಾಮುಲು</p></div>

ಮಾಜಿ ಸಚಿವ ಶ್ರೀರಾಮುಲು

   

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಿರುವ ಮಾಜಿ ಸಚಿವ ಬಿ.ಶ್ರೀರಾಮುಲು ನಡೆಗೆ ಹೈಕೋರ್ಟ್ ಕೆಂಡಾಮಂಡಲವಾಗಿದೆ.

'ಈ ಕೂಡಲೇ ಮುಂದಿನ ಮುದ್ದತಿನ ದಿನಾಂಕ ಯಾವತ್ತಿದೆ ಎಂಬುದನ್ನು ಅರ್ಜಿದಾರರಿಗೆ ತಿಳಿಸಿ' ಎಂದು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್-2 ಬಿ.ಎನ್.ಜಗದೀಶ್ ಅವರಿಗೆ ಸೂಚಿಸಿದ ನ್ಯಾಯಪೀಠ, 'ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ನಿಂತಕೊಳ್ಳದಿದ್ದರೆ ಬಂಧನದ ಆದೇಶ ಹೊರಡಿಸಲಾಗುವುದು' ಎಂದು ಬಿ.ಶ್ರೀರಾಮುಲು ಅವರಿಗೆ ಕಠಿಣ ಎಚ್ಚರಿಕೆ ನೀಡಿದೆ.

ADVERTISEMENT

'ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಚಿತ್ರದುರ್ಗದ 2ನೇ ಹೆಚ್ಚುವರಿ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು‘ ಎಂದು ಕೋರಿ ಶ್ರೀರಾಮುಲು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು; 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರ ಶ್ರೀರಾಮುಲು ಪರ ವಕೀಲರಾದ ಗೌತಮ‌ ನೆಟ್ಟಾರು ಮತ್ತು ಕೆ.ಗಂಗಾಧರ ಅವರು ಪ್ರಕರಣವನ್ನು ನ್ಯಾಯಪೀಠಕ್ಕೆ ವಿವರಿಸಲು ಮುಂದಾದರು. ಆಗ ನ್ಯಾಯಪೀಠ, ‘ಈ ಪ್ರಕರಣ ಯಾವಾಗ ದಾಖಲಾಯಿತು ಮತ್ತು ನಿಮ್ಮ ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿದ್ದಾರೆಯೇ‘ ಎಂದು ಪ್ರಶ್ನಿಸಿತು.

ಇದಕ್ಕೆ ಗೌತಮ್ ಅವರು, ‘2023ರ ಏಪ್ರಿಲ್‌ 29ರಂದು ಖಾಸಗಿ ದೂರು ದಾಖಲಾಗಿದೆ ಮತ್ತು ಈತನಕ ಹಾಜರಾಗಿಲ್ಲ’ ಎಂದು ಉತ್ತರಿಸಿದರು. ‘ಹಾಗಾದರೆ ವಿಚಾರಣಾ ನ್ಯಾಯಾಲಯ ನೋಟಿಸ್ ಅಥವಾ ಸಮನ್ಸ್ ಜಾರಿಗೊಳಿಸಲು ಆದೇಶಿಸಿಲ್ಲವೇ’ ಎಂದು ನ್ಯಾಯಪೀಠ ಮರು ಪ್ರಶ್ನಿಸಿತು. ‘ಹೌದು ಸ್ವಾಮಿ, ಜಾರಿಗೊಳಿಸಿದೆ. ಆದರೆ, ನಮಗೆ ಸಮನ್ಸ್‌ ಸರ್ವ್ ಆಗಿಲ್ಲ’ ಎಂದು ಗೌತಮ್ ಅರುಹಿದರು.

‘ಎಷ್ಟು ಬಾರಿ ಸಮನ್ಸ್ ಹೊರಡಿಸಲಾಗಿದೆ’ ಎಂದು ನ್ಯಾಯಪೀಠ ಬಿ.ಎನ್.ಜಗದೀಶ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಜಗದೀಶ್, ದಾಖಲೆಗಳನ್ನು ತಿರುವಿಹಾಕಿ ‘ನಾಲ್ಕು ಬಾರಿ’ ಎಂದು ವಿವರಿಸಿದರು.

ಈ ಮಾತಿಗೆ ಕ್ರುದ್ಧಗೊಂಡ ನ್ಯಾಯಪೀಠ ಅರ್ಜಿದಾರ ಶ್ರೀರಾಮುಲ ಪರ ವಕೀಲರಿಗೆ, ‘ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳು ಎಂದರೆ‌ ನಿಮಗೆ ಅಷ್ಟೊಂದು ಸದರವೆ? ಅಲ್ಲಿ ಹೋಗಿ ಮ್ಯಾಜಿಸ್ಟ್ರೇಟ್ ಮುಂದೆ ನಿಂತುಕೊಳ್ಳಲು ನಿಮ್ಮ ಅರ್ಜಿದಾರರಿಗೆ ಯಾವ ಅಂತಸ್ತು ಅಡ್ಡಿಯಾಗಿದೆ? ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳು ಎಂದರೆ ಏನೆಂದುಕೊಂಡಿದ್ದೀರಿ? ವಿಚಾರಣಾ ಕೋರ್ಟ್ ನಾಲ್ಕು ಬಾರಿ ಸಮನ್ಸ್ ಹೊರಡಿಸಿದ್ದರೂ ಯಾಕೆ ಹಾಜರಾಗಿಲ್ಲ’ ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿತು.

‘ಹುಷಾರಾಗಿರಿ. ಸಚಿವ, ಮಾಜಿ ಸಚಿವ ಅಥವಾ ಯಾರೇ ಜನಪ್ರತಿನಿಧಿ ಆಗಿರಲೀ, ಇದು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರೂಪುಗೊಂಡಿರುವ, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ ಎಂಬುದನ್ನು ಮರೆಯಬೇಡಿ. ನಿಮ್ಮಗಳ ವರ್ತನೆಗೆ ಈ ವಿಶೇಷ ನ್ಯಾಯಪೀಠ ಸೂಕ್ತ ಮತ್ತು ಕಠಿಣ ಕಾನೂನ‌ ಕ್ರಮ‌ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿತು.

ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಶ್ರೀರಾಮುಲು ಅವರಿಗೆ ಖಡಕ್ ನಿರ್ದೇಶನ‌ ನೀಡಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.