ADVERTISEMENT

ಉನ್ನತ ಶಿಕ್ಷಣ ಸಂಸ್ಥೆಗಳ ಸಾಧನೆಗೆ ‘ಅಟಲ್‌ ರ‍್ಯಾಂಕ್‌’

ಮೊದಲ ಪಟ್ಟಿ 2019ರ ಫೆಬ್ರುವರಿಗೆ ಪ್ರಕಟ: ಸಚಿವ ಜಾವಡೇಕರ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:53 IST
Last Updated 30 ಆಗಸ್ಟ್ 2018, 19:53 IST
ಅಟಲ್‌ ಬಿಹಾರಿ ವಾಜಪೇಯಿ (ಸಂಗ್ರಹ ಚಿತ್ರ)
ಅಟಲ್‌ ಬಿಹಾರಿ ವಾಜಪೇಯಿ (ಸಂಗ್ರಹ ಚಿತ್ರ)   

ನವದೆಹಲಿ: ಸಂಶೋಧನೆ ಮತ್ತು ಹೊಸ ಆವಿಷ್ಕಾರ ಕ್ಷೇತ್ರದಲ್ಲಿ ಸಾಧನೆ ಮಾಡುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಇನ್ನು ಮುಂದೆ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಹೆಸರಿನಲ್ಲಿ ‘ಅಟಲ್‌ ರ‍್ಯಾಂಕ್‌’ ನೀಡಲಿದೆ.

ಆವಿಷ್ಕಾರ ಸಾಧಕ ಸಂಸ್ಥೆಗಳಿಗೆ ಅಟಲ್‌ ರ‍್ಯಾಂಕ್‌ (ಎಆರ್‌ಐಐಎ) ನೀಡುವ ಈ ಹೊಸ ಪದ್ಧತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಗುರುವಾರ ಪ್ರಕಟಿಸಿದರು. ಮೊದಲ ರ‍್ಯಾಂಕ್‌ ಪಟ್ಟಿ 2019ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಸಚಿವರು ತಿಳಿಸಿದರು.

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಉತ್ತೇಜನ ನೀಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸ್ಥಾಪಿಸಿರುವ ‘ಆವಿಷ್ಕಾರ ಘಟಕ (ಇನ್ನೋವೇಷನ್‌ ಸೆಲ್‌)’ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಉನ್ನತ ಶಿಕ್ಷಣ ಸಂಸ್ಥೆಗಳ ಸಾಧನೆ ಗುರುತಿಸಲು ಐದು ಮಾನದಂಡ ರೂಪಿಸಲಾಗಿದೆ. ಈ ಮಾನದಂಡಗಳನ್ನು ಆಧರಿಸಿಯೇ ರ‍್ಯಾಂಕ್‌ ನೀಡಲಾಗುತ್ತದೆ. ಇದಕ್ಕಾಗಿ 100 ಅಂಕಗಳನ್ನು ನಿಗದಿಪಡಿಸಲಾಗಿದೆ.

ಉದ್ಯಮ ಸ್ಥಾಪನೆ ಆಲೋಚನೆ ಸೃಜನೆ, ಉದ್ಯಮ ಅಭಿವೃದ್ಧಿ, ಉದ್ಯಮ ಸ್ಥಾಪನೆಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ 54 ಅಂಕಗಳು, ಹೊಸ ಆವಿಷ್ಕಾರ ಮತ್ತು ಉದ್ಯಮ ಅಭಿವೃದ್ಧಿ ಮೂಲಕ ಆದಾಯ ಸೃಷ್ಟಿಸಿಕೊಳ್ಳುವಿಕೆ ಮತ್ತು ವೆಚ್ಚ ನಿರ್ವಹಣೆಗೆ 20 ಅಂಕ, ಉದ್ಯಮ ಬೆಂಬಲಿಸುವಂತಹ ಮುಂದುವರಿದ ಕೇಂದ್ರ ಮತ್ತು ಸೌಲಭ್ಯಗಳಿಗೆ 10 ಅಂಕ, ಸಂಸ್ಥೆಯ ಪರಿಸರ ಸ್ನೇಹಿ ಅಭಿವೃದ್ಧಿಗೆ 10 ಅಂಕ, ಆಯಾ ಸಂಸ್ಥೆಗಳ ಆಂತರಿಕ ಆಡಳಿತ ಸುಧಾರಿಸಲು ಪರಿಹಾರ ನೀಡುವ ಅತ್ಯುತ್ತಮ ಆವಿಷ್ಕಾರಕ್ಕೆ 6 ಅಂಕ ನಿಗದಿಪಡಿಸಲಾಗಿದೆ.

ಏನಿದು ಇನ್ನೋವೇಷನ್‌ ಸೆಲ್‌?

ಎಐಸಿಟಿಇ ಸ್ಥಾಪಿಸಿರುವ ಆವಿಷ್ಕಾರ ಘಟಕವು (ಇನ್ನೋವೇಷನ್‌ ಸೆಲ್‌) ಖ್ಯಾತ ವಿಜ್ಞಾನಿಗಳು ಮತ್ತು ವೃತ್ತಿಪರರ ನೇತೃತ್ವ ಹೊಂದಿದೆ. ಸಂಶೋಧನಾ ಪ್ರಾಜೆಕ್ಟ್‌ಗಳಿಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ಜತೆಗೆ ಜಂಟಿ ಸಹಕಾರ ನೀಡಲಿದೆ. ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಆವಿಷ್ಕಾರ ಕ್ಲಬ್‌ಗಳ ಜತೆಗೆ ದೇಶದಾದ್ಯಂತ ಸಂಪರ್ಕ ಜಾಲ ಬೆಸೆಯಲಿದೆ.

****

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹೊಸ ಆವಿಷ್ಕಾರ ಮತ್ತು ಸಂಶೋಧನೆಗಾಗಿ ಪರಿಪೂರ್ಣ ಪರಿಸರಸ್ನೇಹಿ ವ್ಯವಸ್ಥೆ ಅಳವಡಿಸಿಕೊಳ್ಳಲು ಅಟಲ್‌ ರ‍್ಯಾಂಕ್‌ ಪದ್ಧತಿ ಪ್ರೋತ್ಸಾಹಿಸಲಿದೆ
–ಪ್ರಕಾಶ್‌ ಜಾವಡೇಕರ್‌, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.