ADVERTISEMENT

ಹಿಜಾಬ್‌: ಹೈಕೋರ್ಟ್‌ ಆದೇಶ ಪ್ರಶ್ನಿಸಿ ‘ಸುಪ್ರೀಂ’ಗೆ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 21:50 IST
Last Updated 15 ಮಾರ್ಚ್ 2022, 21:50 IST
   

ನವದೆಹಲಿ: ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮೇಲ್ಮನವಿ ಸಲ್ಲಿಸಲಾಗಿದೆ.

ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ರಾಜ್ಯ ಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್‌ ಧರಿಸುವುದನ್ನು ನಿಷೇಧಿಸಿ ಆದೇಶಿಸಿರುವುದು ಸರಿಯಲ್ಲ ಎಂದು ನಿಬಾ ನಾಜ್‌ ಎಂಬುವವರು ವಕೀಲ ಅನಾಸ್‌ ತನ್ವೀರ್‌ ಅವರ ಮೂಲಕ ಸಲ್ಲಿಸಿರುವ ಮೇಲ್ಮನವಿಯಲ್ಲಿ ದೂರಲಾಗಿದೆ.

ಹಿಜಾಬ್‌ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿಸಲಾದ ಗೌಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್‌ ಪ್ರಮಾದವೆಸಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ADVERTISEMENT

ಧರ್ಮವನ್ನು ಅನುಸರಿಸುವವರು ಆತ್ಮಸಾಕ್ಷಿಯ ಹಕ್ಕನ್ನು ಹೊಂದಿರುವುದಿಲ್ಲ ಎಂದು ಹೈಕೋರ್ಟ್‌ ತೀರ್ಮಾನಿಸಿದಂತಿದೆ. ಹಿಜಾಬ್ ಧರಿಸುವ ಹಕ್ಕನ್ನು ಆತ್ಮಸಾಕ್ಷಿಯ ಹಕ್ಕಿನ ಭಾಗವಾಗಿ ಸಂವಿಧಾನದ 25ನೇ ವಿಧಿಯ ಅಡಿ ರಕ್ಷಿಸಲಾಗಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

ಆತ್ಮಸಾಕ್ಷಿಯ ಹಕ್ಕು ಮೂಲಭೂತವಾಗಿ ವೈಯಕ್ತಿಕ ಹಕ್ಕಾಗಿದ್ದು, ಈ ಪ್ರಕರಣದಲ್ಲಿ ‘ಅಗತ್ಯ ಧಾರ್ಮಿಕ ಆಚರಣೆ’ಯನ್ನು ಹೈಕೋರ್ಟ್ ಪರಿಗಣಿಸಬಾರದು. ಅಲ್ಲದೆ, ಭಾರತೀಯ ಕಾನೂನು ವ್ಯವಸ್ಥೆಯು ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ಸ್ಪಷ್ಟವಾಗಿ ಗುರುತಿಸಿದೆ. ಇದನ್ನು ಅರಿಯುವಲ್ಲಿ ಹೈಕೋರ್ಟ್ ವಿಫಲವಾಗಿದೆ ಎಂದೂ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ತಲೆಯ ಮೇಲೆ ಪಗಡಿ (ಟರ್ಬನ್‌) ಧರಿಸುವ ಸಿಖ್‌ ಸಮುದಾಯದವರಿಗೆ 1988ರ ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್ 129ರ ಅಡಿ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಸಿಖ್‌ ಸಮುದಾಯದಲ್ಲಿ ಧಾರ್ಮಿಕ ಧೀಕ್ಷೆ ಪಡೆದವರಿಗೆ ವಿಮಾನದಲ್ಲಿ ಕಿರ್ಪಾನ್‌ (ಚಿಕ್ಕ ಕತ್ತಿ) ಕೊಂಡೊಯ್ಯಲು ನಾಗರಿಕ ವಿಮಾನಯಾನ ಸಚಿವಾಲಯ ನಿಯಮ ರೂಪಿಸಿದೆ ಎಂಬುದನ್ನೂ ಗಮನಿಸುವುದು ಸೂಕ್ತ ಎಂದು ಹೇಳಲಾಗಿದೆ.

ಮುಸ್ಲಿಂ ಮಹಿಳೆಯರನ್ನು ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ನಿರ್ದಿಷ್ಟವಾಗಿ ಇಸ್ಲಾಮಿಕ್ ನಂಬಿಕೆಯ ಅನುಯಾಯಿಗಳ ಮೇಲೆ ದಾಳಿ ಮಾಡುವ ಪರೋಕ್ಷ ಉದ್ದೇಶದಿಂದ ರಾಜ್ಯ ಸರ್ಕಾರವು ಫೆಬ್ರವರಿ 5ರಂದು ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಹಿಜಾಬ್‌ ನಿಷೇಧಿಸಿ ಆದೇಶಿಸಿದೆ ಎಂದೂ ಅರ್ಜಿಯಲ್ಲಿ ದೂರಲಾಗಿದೆ.

ಸಮವಸ್ತ್ರದ ಹೆಸರಿನಲ್ಲಿ ಜಾತ್ಯತೀತತೆ ಮತ್ತು ಸಮಾನತೆಯನ್ನು ಸಾರುವ ನೆಪದಲ್ಲಿ ದಾಳಿ ನಡೆಸಲಾಗಿದೆ. ಕಾಲೇಜುಗಳ ಆಡಳಿತ ಮಂಡಳಿಗಳು ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆ ಆವರಣಕ್ಕೆ ಪ್ರವೇಶಿಸದಂತೆ ತಡೆದಿವೆ. ಸರ್ಕಾರದ ಮಲತಾಯಿ ಧೋರಣೆಯು ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಯನ್ನು ಪಾಲಿಸದಂತೆ ಹತ್ತಿಕ್ಕಲಾಗಿದೆ ಎಂದೂ ಮೇಲ್ಮನವಿ ತಿಳಿಸಿದೆ.

ರಾಜ್ಯದ ಶಾಲೆ– ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಆರು ಜನ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿರುವ ರಾಜ್ಯ ಹೈಕೋರ್ಟ್, ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಸಾಂವಿಧಾನಿಕವಾದ ಸಮವಸ್ತ್ರವನ್ನು ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ ಎಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.