ಹಿಮಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹ. ಎನ್‌ಡಿಆರ್‌ಎಫ್‌ನಿಂದ ರಕ್ಷಣಾ ಕಾರ್ಯಾಚರಣೆ
(ಪಿಟಿಐ ಚಿತ್ರ)
ಶಿಮ್ಲಾ/ಧರ್ಮಶಾಲಾ: ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ಸಂಭವಿಸಿದ್ದ ಹಠಾತ್ ಪ್ರವಾಹದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬುಧವಾರ ಕಂಗ್ರಾ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿತ್ತು. ಸ್ಥಳದಲ್ಲಿ ಇನ್ನೂ 6 ಮಂದಿ ನಾಪತ್ತೆಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಇತರ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಬುಧವಾರ 2 ಹಾಗೂ ಗುರುವಾರ 3 ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರನ್ನು ಜಮ್ಮು ಮತ್ತು ಕಾಶ್ಮೀರದ ಚಾಯಿನ್ ಸಿಂಗ್, ಚಂಬಾದ ಆದಿತ್ಯ ಠಾಕೂರ್, ನೂರ್ಪುರದ ಸಂಜಯ್ , ಉತ್ತರ ಪ್ರದೇಶದ ಪ್ರದೀಪ್ ವರ್ಮಾ ಹಾಗೂ ಚಂದನ್ ಎಂದು ಗುರುತಿಸಲಾಗಿದೆ ಎಂದು ಕಂಗ್ರಾ ಎಸ್‌ಪಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿ ಹೋಗಿರುವವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಎನ್‌ಡಿಆರ್‌ಎಫ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ಹೇಳಿದ್ದಾರೆ.
ಇಂದಿರಾ ಪ್ರಿಯದರ್ಶಿನಿ ಜಲವಿದ್ಯುತ್ ಯೋಜನಾ ಸ್ಥಳದ ಬಳಿಯ ತಾತ್ಕಾಲಿಕ ಆಶ್ರಯ ತಾಣಗಳಲಿದ್ದ ಸುಮಾರು 15-20 ಕಾರ್ಮಿಕರು ಕೊಚ್ಚಿಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಇವರಲ್ಲಿ ಕೆಲವರನ್ನು ರಕ್ಷಿಸಲಾಗಿದೆಯಾದರೂ, ಎಷ್ಟು ಮಂದಿಯನ್ನು ರಕ್ಷಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಪ್ರತಿಕೂಲ ಹವಾಮಾನ ಇರುವುದರಿಂದ ಶೋಧ ಕಾರ್ಯಾಚರಣೆ ಕ್ಲಿಷ್ಟಕರವಾಗಿದೆ. ಆದರೂ ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್), ಪೊಲೀಸರು ಮತ್ತು ಗೃಹರಕ್ಷಕ ದಳದ ತಂಡಗಳು ಜಂಟಿ ಶೋಧದಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಸಿಂಗ್ ಹೇಳಿದ್ದಾರೆ.
ಮೃತ ಕಾರ್ಮಿಕರ ಕುಟುಂಬಗಳಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಂತಾಪ ಸೂಚಿಸಿದ್ದಾರೆ. 'ಈ ಬಿಕ್ಕಟ್ಟಿನ ಸಮಯದಲ್ಲಿ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ಇಲ್ಲಿನ ನಾಗರಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸಮರ್ಪಿತನಾಗಿದ್ದಾನೆ. ಅಗಲಿದ ಆತ್ಮಗಳಿಗೆ ಭಗವಂತ ಶಾಂತಿ ನೀಡಲಿ. ಮೃತರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.