
ಎಐ ಚಿತ್ರ
ಶಿಮ್ಲಾ: ಕೆಲವು ವಾರಗಳ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾರಾಡಿದ ಪಿಐಎ (ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಮತ್ತು ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌ಗಳ ಮೂಲ ಪತ್ತೆಗಾಗಿ ಹಿಮಾಚಲ ಪ್ರದೇಶ ಪೊಲೀಸರು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಭೇಟಿಯ ವೇಳೆ ಪೊಲೀಸರು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
‘ಈವರೆಗೆ ಪತ್ತೆಯಾಗಿರುವ ಬಲೂನ್‌ಗಳ ಒಳಗೆ ಗ್ಯಾಜೆಟ್‌ಗಳು, ಕಣ್ಗಾವಲು ಸಾಧನಗಳು, ಟ್ರ್ಯಾಕರ್‌ಗಳು ಹಾಗೂ ಯಾವುದೇ ಶಂಕಾಸ್ಪದ ವಸ್ತುಗಳು ಕಂಡುಬಂದಿಲ್ಲ. ಇದೇ ರೀತಿ ಬಲೂನ್‌ಗಳು ಕಂಡು ಬಂದಿರುವ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಿಂದಲೂ ಮಾಹಿತಿ ಪಡೆದಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆದರೂ, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಬಲೂನ್‌ಗಳ ಮೂಲದ ಬಗ್ಗೆ ಸ್ಥಳೀಯ ಮಾರಾಟಗಾರರನ್ನು ವಿಚಾರಿಸುತ್ತಿದ್ದಾರೆ’ ಎಂದು ವಿವರಿಸಿದರು.
ಇತ್ತೀಚೆಗೆ, ದೌಲತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಾಲೆಟ್ ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಯ ಚಾವಣಿಯ ಮೇಲೆ ಪಿಐಎ ಎಂದು ಬರೆಯಲಾದ ವಿಮಾನ ಆಕಾರದ ಬಲೂನ್ ನೋಡಿ ಆತಂಕಗೊಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಲೂನ್ ವಶಪಡಿಸಿಕೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ, ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದರು. ಅಲ್ಲಿ ಬೇರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದರು.
ಡಿಸೆಂಬರ್ 8ರಂದು ಇಂಥದ್ದೇ ಮೂರು ಬಲೂನ್‌ಗಳು ಗಾಗ್ರೆಟ್ ಉಪ ವಲಯದ ಟಟೆಹ್ರಾ ಹಳ್ಳಿಯಲ್ಲಿ ಪತ್ತೆಯಾಗಿದ್ದವು. ಇವುಗಳ ಮೇಲೆ ಪಾಕಿಸ್ತಾನದ ಧ್ವಜ ಮತ್ತು ‘ಐ ಲವ್ ಪಾಕಿಸ್ತಾನ’ ಎಂದು ಬರೆಯಲಾಗಿತ್ತು. ಕೆಲವು ತಿಂಗಳ ಹಿಂದೆ ಹಮೀರ್‌ಪುರ ಮತ್ತು ಕಂಗ್ರಾ ಜಿಲ್ಲೆಗಳಲ್ಲೂ ಇದೇ ರೀತಿಯ ಬಲೂನ್‌ಗಳು ಪತ್ತೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.