ADVERTISEMENT

ಹಿಮಾಚಲ ಪ್ರದೇಶ ಭೂಕುಸಿತ: ಮತ್ತೆ 3 ಶವಗಳು ಪತ್ತೆ; ಮೃತರ ಸಂಖ್ಯೆ 13ಕ್ಕೆ ಏರಿಕೆ

ಪಿಟಿಐ
Published 12 ಆಗಸ್ಟ್ 2021, 5:57 IST
Last Updated 12 ಆಗಸ್ಟ್ 2021, 5:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ‘ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಗುರುವಾರ ಮತ್ತೆ ಮೂರು ಶವಗಳು ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಮಣ್ಣಿನಡಿಯಲ್ಲಿ ಸಿಲುಕಿದ್ದ ಹಿಮಾಚಲ ರಸ್ತೆ ಸಾರಿಗೆ ನಿಗಮದ(ಎಚ್‌ಆರ್‌ಟಿಸಿ) ಬಸ್‌ನಲ್ಲಿ ಮೂರು ಶವಗಳು ಸಿಕ್ಕಿವೆ. ಬಸ್‌ ಸಂಪೂರ್ಣವಾಗಿ ಹಾನಿಗೊಳಾಗಿದೆ. ಮತ್ತೊಂದು ವಾಹನ ಮಣ್ಣಿನಲ್ಲಿ ಹೂತು ಹೋಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಸುದೇಶ್‌ ಕುಮಾರ್‌ ಮೊಕ್ತಾ ಅವರು ಮಾಹಿತಿ ನೀಡಿದರು.

‘ಗುರುವಾರ ಬೆಳಿಗ್ಗೆ 6 ಗಂಟೆಗೆ ರಕ್ಷಣಾ ಕಾರ್ಯಾಚರಣೆಯು ಪುನರಾರಂಭಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ಭಾರತ-ಟಿಬೆಟ್‌ ಗಡಿ ಭದ್ರತಾ ಪಡೆ ಪೊಲೀಸ್‌ (ಐಟಿಬಿಪಿ) ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೆ ಸ್ಥಳೀಯ ಪೊಲೀಸ್‌ ಪಡೆ ಹಾಗೂ ಹೋಂ ಗಾರ್ಡ್‌ ಸಿಬ್ಬಂದಿ ಕೂಡ ಕೈಜೋಡಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಬುಧವಾರ ರಾತ್ರಿ 10 ಗಂಟೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಎಚ್‌ಆರ್‌ಟಿಸಿ ಬಸ್‌ ಕಿನ್ನೌರ್‌ನ ರಿಕಾಂಗ್‌ ಪಿಓದಿಂದ ಶಿಮ್ಲಾಗೆ ಸಂಚರಿಸುತ್ತಿತ್ತು. ಈ ವೇಳೆ ನಿಗುಲ್ಸರಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ–5ರಲ್ಲಿ ಭೂ ಕುಸಿತ ಸಂಭವಿಸಿದೆ. ಬುಧವಾರ ರಾತ್ರಿ ವೇಳೆಗೆ 10 ಮೃತದೇಹಗಳು ಸಿಕ್ಕಿದ್ದವು. 13 ಮಂದಿಯನ್ನು ರಕ್ಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.