ADVERTISEMENT

1ನೇ ತರಗತಿಗೆ ಹಿಂದಿ ಬೇಡ; 5ನೇ ತರಗತಿಯಿಂದ ಕಲಿಸಿ: ಅಜಿತ್‌ ಪವಾರ್‌ ಅಪಸ್ವರ

ಮಾತೃಭಾಷೆಗೆ ಆದ್ಯತೆಯಿರಲಿ; 5ನೇ ತರಗತಿಯಿಂದ ಕಲಿಸಿ

ಪಿಟಿಐ
Published 25 ಜೂನ್ 2025, 13:19 IST
Last Updated 25 ಜೂನ್ 2025, 13:19 IST
ಅಜಿತ್ ಪವಾರ್
ಅಜಿತ್ ಪವಾರ್   

ಪುಣೆ: ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಒಂದನೇ ತರಗತಿಯಿಂದಲೇ ಹಿಂದಿ ಬೋಧಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ‘ಐದನೇ ತರಗತಿಯಿಂದ ಕಲಿಸಬೇಕು’ ಎಂದಿದ್ದಾರೆ.

‘ವಿದ್ಯಾರ್ಥಿಗಳು ಒಂದನೇ ತರಗತಿಯಲ್ಲಿ ಮರಾಠಿ ಕಲಿಯಬೇಕು. ಇದರಿಂದಾಗಿ ಅವರು ಚೆನ್ನಾಗಿ ಓದಲು, ಬರೆಯಲು ಸಾಧ್ಯವಾಗುತ್ತದೆ’ ಎಂದು ಮುಂಬೈನಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಭಾಷಾ ವಿಷಯ ಕುರಿತಂತೆ ಮುಖ್ಯಮಂತ್ರಿ ಜೊತೆ ಮಾತನಾಡಿರುವುದಾಗಿಯೂ ಪವಾರ್‌ ಹೇಳಿದರು.

ADVERTISEMENT

ನಟ ಸಯಾಜಿ ಶಿಂದೆ ಸಹ ಒಂದನೇ ತರಗತಿಯಿಂದಲೇ ಹಿಂದಿ ಪರಿಚಯಿಸುವುದನ್ನು ವಿರೋಧಿಸಿದ್ದಾರೆ.

ಮರಾಠಿ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುವುದು ಎಂದು ರಾಜ್ಯ ಸರ್ಕಾರ ಕಳೆದ ವಾರ ಆದೇಶ ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಅಸಮಾಧಾನ ವ್ಯಕ್ತವಾದ ಬೆನ್ನಿಗೆ ಹಿಂದಿ ಕಡ್ಡಾಯವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದ ಸರ್ಕಾರವು, ಹಿಂದಿ ಹೊರತುಪಡಿಸಿ ಯಾವುದೇ ಭಾರತೀಯ ಭಾಷೆಯ ಅಧ್ಯಯನ ಮಾಡಲು ಒಂದು ತರಗತಿಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳ ಒಪ್ಪಿಗೆಯನ್ನು ಕಡ್ಡಾಯಗೊಳಿಸಿತ್ತು.

‘ಸಾಹಿತಿಗಳು, ಭಾಷಾ ತಜ್ಞರು ಹಾಗೂ ರಾಜಕೀಯ ನಾಯಕರೊಂದಿಗೆ ಚರ್ಚಿಸಿದ ಬಳಿಕವೇ ತ್ರಿಭಾಷಾ ಸೂತ್ರದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು’ ಎಂದು ಮುಂಬೈನಲ್ಲಿ ನಡೆದ ಸಭೆಯ ನಂತರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.