ADVERTISEMENT

ಕಮಲಾರನ್ನು ದುರ್ಗೆಯಾಗಿ ಚಿತ್ರಿಸಿದ್ದಕ್ಕೆ ಆಕ್ಷೇಪ: ಕ್ಷಮೆಗೆ ಹಿಂದೂಗಳ ಆಗ್ರಹ

ಪಿಟಿಐ
Published 20 ಅಕ್ಟೋಬರ್ 2020, 8:42 IST
Last Updated 20 ಅಕ್ಟೋಬರ್ 2020, 8:42 IST
   

ವಾಷಿಂಗ್ಟನ್‌: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ‘ದುರ್ಗಾಮಾತೆ‘ಗೆ ಹೋಲುವಂತೆ ಚಿತ್ರಿಸಿ ಅದನ್ನು ಟ್ವೀಟ್‌ ಮಾಡಿದ ಕಮಲಾ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ಕ್ಷಮೆಯಾಚಿಸ ಬೇಕು ಎಂದು ಅಮೆರಿಕದಲ್ಲಿರುವ ಹಿಂದೂ ಸಮುದಾಯದವರು ಒತ್ತಾಯಿಸಿದ್ದಾರೆ.

ಮೀನಾ ಹ್ಯಾರಿಸ್ ಅವರು, ವಿವಾದ ಸೃಷ್ಟಿಸಿರುವ ಟ್ವೀಟ್‌ ಹಾಗೂ ಚಿತ್ರವನ್ನು ತಕ್ಷಣ ತೆಗೆದು ಹಾಕಿದ್ದಾರೆ. ಅಮೆರಿಕದಲ್ಲಿ ವಕೀಲೆಯಾಗಿರುವ ಮೀನಾ ಅವರು, ಮಕ್ಕಳ ಪುಸ್ತಕದ ಲೇಖಕಿಯೂ ಹೌದು. ಜತೆಗೆ, ಫೆನೊಮಿನಲ್ ವುಮೆನ್ ಆಕ್ಷನ್ ಆಂದೋಲನದ ಸಂಸ್ಥಾಪಕಿ.

ಮೀನಾ ಅವರ ಟ್ವೀಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಅಮೆರಿಕನ್‌ ಫೌಂಡೇಷನ್‌ನ ಸುಹಾಗ್ ಎ ಶುಕ್ಲಾ, ‘ನೀವು ದೇವಿ ದುರ್ಗಾಮಾತೆಯ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದ್ದೀರಿ. ದೇವಿಯ ಮುಖವನ್ನು ತಿರುಚಿದಂತೆ ಚಿತ್ರಿಸುವ ಮೂಲಕ, ವಿಶ್ವದ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದೀರಿ‘ ಎಂದು ಟ್ವೀಟ್ ಮಾಡಿದ್ದಾರೆ. ಅಮೆರಿಕದಲ್ಲಿರುವ ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ಈ ಫೌಂಡೇಷನ್‌, ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಾಗ ಅನುಸರಿಸುವ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ADVERTISEMENT

ಹಿಂದೂ ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ರಿಷಿ ಭೂತಾಡಾ, ‘ಈ ಅವಮಾನಕರ ಚಿತ್ರವನ್ನು ಮೀನಾ ಹ್ಯಾರಿಸ್ ರಚಿಸಿಲ್ಲ. ಅವರು ಈ ಚಿತ್ರವನ್ನು ಟ್ವೀಟ್ ಮಾಡುವ ಮುನ್ನವೇ ಅದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಈ ಚಿತ್ರವನ್ನು ನಮ್ಮ ತಂಡ ಸೃಷ್ಟಿಸಿಲ್ಲ ಎಂದು ಈಗಾಗಲೇ ಜೊ ಬೈಡನ್ ಪ್ರಚಾರ ತಂಡ ಖಚಿತಪಡಿಸಿದೆ‘ ಎಂದು ಸ್ಪಷ್ಟಪಡಿಸಿದ್ದಾರೆ.

‘ಮೀನಾ ಅವರು ಈ ಚಿತ್ರವನ್ನು ಟ್ವೀಟ್‌ನಿಂದ ತೆಗೆದು ಹಾಕಿದ್ದರೂ, ಅವರು ಕ್ಷಮೆಯಾಚಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಮ್ಮ ದೇಶದ ಧಾರ್ಮಿಕ ವಿಚಾರ ಅಮೆರಿಕದ ರಾಜಕೀಯ ಚಟುವಟಿಕೆಗಳಲ್ಲಿ ಬಳಕೆಯಾಗಬಾರದು. ಹಿಂದೊಮ್ಮೆ ಜಾಹಿರಾತಿನಲ್ಲಿ ಇದೇ ರೀತಿ ಮಾಡಿದ್ದಾಗ, ಆಗಲೂ ನಾನು ಹೀಗೆ ಹೇಳಿದ್ದೆ‘ ಎಂದು ಭೂತಾಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.