ADVERTISEMENT

'ಅಪಹರಿಸಿ, ಅತ್ಯಾಚಾರವೆಸಗುತ್ತೇನೆ': ಮುಸ್ಲಿಂ ಮಹಿಳೆಯರಿಗೆ ಸ್ವಾಮೀಜಿ ಬೆದರಿಕೆ

ಸಂಜಯ ಪಾಂಡೆ
Published 8 ಏಪ್ರಿಲ್ 2022, 12:28 IST
Last Updated 8 ಏಪ್ರಿಲ್ 2022, 12:28 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಲಖನೌ:ಹಿಂದೂ ಹೆಣ್ಣುಮಕ್ಕಳಿಗೆ ಮುಸ್ಲಿಂ ಸಮುದಾಯದ ಪುರುಷರು ಕಿರುಕುಳ ನೀಡಿದರೆ, ಮುಸ್ಲಿಂ ಮಹಿಳೆಯರನ್ನು ಸಾರ್ವಜನಿಕವಾಗಿ ಅಪಹರಿಸಿ, ಅತ್ಯಾಚಾರವೆಸಗಲಾಗುವುದು ಎಂದು ಸ್ವಾಮೀಜಿಯೊಬ್ಬರು ಬೆದರಿಕೆ ಹಾಕಿದ್ದಾರೆ.

ಈ ರೀತಿ ಹೇಳಿಕೆ ನೀಡಿರುವ ಸ್ವಾಮೀಜಿಯನ್ನು ಮಹಂತ ಬಜರಂಗ್‌ ಮುನಿ ದಾಸ್ ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ದೇವಾಲಯವೊಂದರ ಮುಖ್ಯಸ್ಥರಾಗಿದ್ದು, ಖೈರಾಬಾದ್‌ ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ನಡೆದ ಮೆರವಣಿಗೆ ವೇಳೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖೈರಾಬಾದ್‌ನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನಮಸೀದಿ ಎದುರು ಮೆರವಣಿಗೆ ಸಾಗುತ್ತಿದ್ದಾಗ ಜೀಪ್‌ನಲ್ಲಿ ಕುಳಿತಿದ್ದ ಮುನಿ ದಾಸ್‌ ಅವರು,'ಮುಸ್ಲಿಂ ಪುರುಷರೇನಾದರೂ, ಹಿಂದೂ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಪ್ರಯತ್ನಿಸಿದರೆ, ನಾನು ಬಹಿರಂಗವಾಗಿ ನಿಮ್ಮ (ಮುಸ್ಲಿಂ) ಹೆಣ್ಣು ಮಕ್ಕಳನ್ನು ಅಪಹರಿಸಿ, ಅತ್ಯಾಚಾರವೆಸಗುತ್ತೇನೆ' ಎಂದುಹೇಳಿದ್ದಾರೆ. ಈ ವಿಡಿಯೊ ಶುಕ್ರವಾರ ವೈರಲ್ ಆಗಿದೆ.

ADVERTISEMENT

ಮುನಿ ದಾಸ್‌ ಕುಳಿತಿದ್ದ ವಾಹನವನ್ನು ಪೊಲೀಸರು ಹಿಂಬಾಲಿಸುತ್ತಿರುವುದು ಮತ್ತೊಂದು ವಿಡಿಯೊದಲ್ಲಿ ಸೆರೆಯಾಗಿದೆ.

ವಾರದ ಹಿಂದೆಯೇ ಸ್ವಾಮೀಜಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ, ವಿಡಿಯೊ ವೈರಲ್‌ ಆದ ನಂತರವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸೀತಾಪುರದ ಪೊಲೀಸ್ ಅಧಿಕಾರಿಯೊಬ್ಬರು, 'ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಕ್ಷ್ಯಗಳನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

ಪಟ್ಟಣದಲ್ಲಿದೇವಾಲಯದ ಜಾಗ ಅತಿಕ್ರಮಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಸ್ವಾಮೀಜಿ ಇತ್ತೀಚೆಗೆ ಸುದ್ದಿಯಲ್ಲಿದ್ದರು.

ಸ್ವಾಮೀಜಿಯ ಹೇಳಿಕೆಯನ್ನು ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು), ಜಿಲ್ಲಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದೆ. 'ಇಂತಹ ವಿಚಾರಗಳಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿರಬಾರದು' ಎಂದೂ ಕಟುವಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.