ನವದೆಹಲಿ: ರಾಜ್ಯ ವಿಧಾನ ಮಂಡಲ ಅಂಗೀಕಾರ ನೀಡಿರುವ ಮಸೂದೆಯ ವಿಚಾರವಾಗಿ ಕ್ರಮಗಳನ್ನು ಕೈಗೊಳ್ಳಲು ರಾಜ್ಯಪಾಲರಿಗೆ ಸಮಯಮಿತಿ ನಿಗದಿಪಡಿಸಿದ್ದಕ್ಕಾಗಿ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ಅನ್ನು ಶ್ಲಾಘಿಸಿದ್ದಾರೆ.
ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು 10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ತಡೆಹಿಡಿದು ಇರಿಸಿಕೊಂಡಿದ್ದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದು ಸುಪ್ರೀಂ ಕೋರ್ಟ್ ಕಳೆದ ಮಂಗಳವಾರ ಹೇಳಿತ್ತು.
ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಬಲ್, ‘ಸಂವಿಧಾನದ ತತ್ವಗಳ ಅಡಿಯಲ್ಲಿ ಒಕ್ಕೂಟ ವ್ಯವಸ್ಥೆಯು ಮುಂದುವರಿಯುವುದನ್ನು ಸುಪ್ರೀಂ ಕೋರ್ಟ್ ತೀರ್ಪು ಖಾತರಿಪಡಿಸುತ್ತದೆ’ ಎಂದು ಹೇಳಿದರು.
‘ಸುಪ್ರೀಂ ಕೋರ್ಟ್ ಈಚೆಗೆ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಪಾಲರು ನಿರಂಕುಶವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ ಎಂಬ ವಿಷಯ ಚರ್ಚೆಯಲ್ಲಿದೆ. ರಾಜ್ಯ ವಿಧಾನ ಮಂಡಲವು ಅಂಗೀಕಾರ ನೀಡಿದ ಮಸೂದೆಯನ್ನು ರಾಜ್ಯಪಾಲರು ತಮ್ಮಲ್ಲೇ ಇಟ್ಟುಕೊಂಡು ಸಹಿ ಹಾಕಲು ವಿಳಂಬ ಮಾಡುತ್ತಾರೆ. ಸಹಿ ಬೀಳದ ಕಾರಣ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವರು’ ಎಂದು ದೂರಿದರು.
‘ಬಿಜೆಪಿ ಮತ್ತು ಎನ್‌ಡಿಎಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಇದು ಸಂಭವಿಸುತ್ತಿತ್ತು. ಆದ್ದರಿಂದ ಇದೊಂದು ರಾಜಕೀಯವಲ್ಲದೆ ಬೇರೇನೂ ಅಲ್ಲ’ ಎಂದು ಹೇಳಿದರು.
ರಾಜ್ಯಪಾಲರು ಮಾತ್ರವಲ್ಲ ಕೆಲವು ರಾಜ್ಯಗಳಲ್ಲಿ ಸ್ಪೀಕರ್‌ಗಳೂ ವಿಧಾನಸಭೆಯಲ್ಲಿ ನಿರಂಕುಶವಾಗಿ ವರ್ತಿಸುತ್ತಾರೆಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.