ADVERTISEMENT

ಹಿಜ್ಬುಲ್ ಮುಖ್ಯಸ್ಥ ಡಾ.ಸೈಫುಲ್ಲಾ ಹತ್ಯೆ; ಭದ್ರತಾ ಪಡೆಗಳ ದೊಡ್ಡ ಯಶಸ್ಸು

ಕಾಶ್ಮೀರದ ಐಜಿಪಿ ವಿಜಯ್‌ಕುಮಾರ್ ಹೇಳಿಕೆ

ಪಿಟಿಐ
Published 1 ನವೆಂಬರ್ 2020, 17:46 IST
Last Updated 1 ನವೆಂಬರ್ 2020, 17:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ನಗರದ ಹೊರವಲಯದ ರಂಗ್ರೆತ್ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಸೈಫುಲ್ಲಾ ಮಿರ್ ಅಲಿಯಾಸ್‌ ಘಾಜಿ ಹೈದರ್ ಹತ್ಯೆಗೀಡಾಗಿದ್ದಾನೆ.

ಮೇ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ನಾಯಕ ರಿಯಾಜ್ ನಾಯ್ಕೂ ಹತ್ಯೆಯ ನಂತರ ಸಂಘಟನೆಯ ಉಸ್ತುವಾರಿಯನ್ನು ಸೈಫುಲ್ಲಾ ಹೊತ್ತಿದ್ದ. ಕಾಶ್ಮೀರ ಕಣಿವೆಯಲ್ಲಿ ನಡೆದ ಅನೇಕ ದಾಳಿಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸೈಫುಲ್ಲಾ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ. ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಗಳಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಿಯಾಜ್ ನಂತರ ಹಿಜ್ಬುಲ್ ಸಂಘಟನೆಯ ನೇತೃತ್ವವನ್ನು ಸೈಫುಲ್ಲಾ ವಹಿಸಿಕೊಳ್ಳುತ್ತಾನೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಕ್ತಾರ ಸಲೀಂ ಹಶ್ಮಿ ಮೇ 11ರಂದು ಘೋಷಣೆ ಮಾಡಿದ್ದ.

ADVERTISEMENT

‘ದಕ್ಷಿಣ ಕಾಶ್ಮೀರದಿಂದ ಬಂದಿದ್ದ ಸೈಫುಲ್ಲಾ ಮನೆಯೊಂದರಲ್ಲಿ ಅಡಗಿದ್ದ ಖಚಿತ ಮಾಹಿತಿ ದೊರೆತಿತ್ತು. ಆ ಪ್ರದೇಶದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಸೈಫುಲ್ಲಾನನ್ನು ಹತ್ಯೆ ಮಾಡಲಾಗಿದೆ.ಸೈಫುಲ್ಲಾ ಹತ್ಯೆ ಪೊಲೀಸ್ ಮತ್ತು ಭದ್ರತಾ ಪಡೆಗಳ ದೊಡ್ಡ ಯಶಸ್ಸು. ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಕಾಶ್ಮೀರದ ಐಜಿಪಿ ವಿಜಯಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳಲಾಗಿದೆ.

ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ನಾಗಿ ಮೊಹಮ್ಮದ್ ಅಶ್ರಫ್ ಖಾನ್ ಅಲಿಯಾಸ್ ಅಶ್ರಫ್ ಮೊಲ್ವಿ ಅಥವಾ ಜುಬೈರ್ ವಾನಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಯಾರು ಈ ಸೈಫುಲ್ಲಾ?

ಸರ್ಕಾರಿ ಶಾಲಾ ಶಿಕ್ಷಕನ ಮಗನಾಗಿದ್ದ ಸೈಫುಲ್ಲಾನಿಗೆ ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. 10ನೇ ತರಗತಿ ಮುಗಿದ ಬಳಿಕ 2010ರಲ್ಲಿ ಪುಲ್ವಾಮಾದ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೊಮಾ ಇನ್ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಕೋರ್ಸ್ ಮಾಡಿದ್ದ.

ಗಾಯಗೊಂಡಿದ್ದ ಉಗ್ರರಿಗೆ ಸೈಫುಲ್ಲಾ ಚಿಕಿತ್ಸೆ ನೀಡುತ್ತಿದ್ದ ಕಾರಣ ಈತನನ್ನು ‘ಡಾಕ್ಟರ್ ಸೈಫ್’ ಎಂದು ಗುಪ್ತನಾಮದಿಂದ (ಕೋಡ್) ಕರೆಯಲಾಗುತ್ತಿತ್ತು.

2014ರಲ್ಲಿ ಹಿಜ್ಬುಲ್ ಮುಜಾಹಿದೀನ್‌ ಸಂಘ ಟನೆಯ ನಾಯಕ ರಿಯಾಜ್ ನಾಯ್ಕೂ, ಸೈಫುಲ್ಲಾನನ್ನು ಸಂಘಟನೆಗೆ ಸೇರಿಸಿಕೊಂಡಿದ್ದ. 2015ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಉಗ್ರರಾದ ಬುರ್ಹಾನ್ ವಾನಿ ಮತ್ತು ಸಹಚರರ ಗುಂಪಿನ ಫೋಟೊ
ದಲ್ಲಿ ಈತನೂ ಇದ್ದ. ಬುರ್ಹಾನ್ ಹತ್ಯೆಯ ನಂತರ ಆ ಗುಂಪಿನಲ್ಲಿ ಬದುಕುಳಿದಿದ್ದ ಏಕ ಸದಸ್ಯ ಈತನಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.