ADVERTISEMENT

‘Z’ ಶ್ರೇಣಿಯ ಭದ್ರತೆ ಒಪ್ಪಿಕೊಳ್ಳುವಂತೆ ಒವೈಸಿಗೆ ಗೃಹ ಸಚಿವ ಅಮಿತ್ ಶಾ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2022, 10:52 IST
Last Updated 7 ಫೆಬ್ರುವರಿ 2022, 10:52 IST
ಸದನದಲ್ಲಿ ಮಾತನಾಡುತ್ತಿರುವ ಗೃಹ ಸಚಿವ ಅಮಿತ್‌ ಶಾ
ಸದನದಲ್ಲಿ ಮಾತನಾಡುತ್ತಿರುವ ಗೃಹ ಸಚಿವ ಅಮಿತ್‌ ಶಾ   

ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಅವರು ‘ಝಡ್‌’ ಶ್ರೇಣಿಯ ಭದ್ರತೆಯನ್ನು ಒಪ್ಪಿಕೊಳ್ಳಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಅವರು ಸಂಸತ್ತಿನಲ್ಲಿ ಸೋಮವಾರ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಬೆಂಗಾವಲು ವಾಹನದ ಮೇಲೆ ಫೆ.3ರಂದು ಗುಂಡಿನ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒವೈಸಿ ಅವರಿಗೆ ‘ಝಡ್‌’ ಶ್ರೇಣಿಯ ಭದ್ರತೆ ಒದಗಿಸಿತ್ತಾದರೂ, ಅವರು ಅದನ್ನು ಸ್ವೀಕರಿಸಿರಲಿಲ್ಲ.

ಈ ಬಗ್ಗೆ ಸದನದಲ್ಲಿ ಮಾತನಾಡಿರುವ ಅಮಿತ್‌ ಶಾ ‘ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಎರಡು ಅಕ್ರಮ ಪಿಸ್ತೂಲ್ ಮತ್ತು ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಿಧಿ ವಿಜ್ಞಾನ ತಂಡವು ಕಾರು ಮತ್ತು ಘಟನೆಯ ಸ್ಥಳದ ತನಿಖೆ ನಡೆಸುತ್ತಿದೆ. ಸಾಕ್ಷ್ಯ ಸಂಗ್ರಹಿಸುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಒವೈಸಿಗೆ ಅವರಿಗೆ ಬುಲೆಟ್ ಪ್ರೂಫ್ ವಾಹನ ಮತ್ತು ‘ಝಡ್‌’ ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ. ಆದರೆ, ಅದನ್ನು ತಿರಸ್ಕರಿಸಿರುವುದಾಗಿಅವರು ಮೌಖಿಕವಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ನೀಡಿರುವ ಭದ್ರತೆಯನ್ನು ಒಪ್ಪಿಕೊಳ್ಳಬೇಕು ಎಂದುನಾನು ಅವರನ್ನು ವಿನಂತಿಸುತ್ತೇನೆ’ ಎಂದು ಗೃಹ ಸಚಿವ ಅಮಿತ್‌ ಶಾ ಸಂಸತ್‌ನಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.