ADVERTISEMENT

ಸ್ವಾತಂತ್ರ್ಯ ಲಭಿಸಿ 75 ವರ್ಷ ಗತಿಸಿದರೂ ಜಾತೀಯತೆ ಅಳಿದಿಲ್ಲ: ‘ಸುಪ್ರೀಂ’ ಕಳವಳ

ಪಿಟಿಐ
Published 28 ನವೆಂಬರ್ 2021, 16:19 IST
Last Updated 28 ನವೆಂಬರ್ 2021, 16:19 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಜಾತೀಯತೆ ಪ್ರೇರಿತ ಹಿಂಸಾಕೃತ್ಯಗಳು ಇನ್ನೂ ನಡೆಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಗತಿಸಿದರೂ ಜಾತಿ ಪದ್ಧತಿ ನಿರ್ಮೂಲನೆಯಾಗಿಲ್ಲ ಎಂಬುದನ್ನು ಇಂಥ ಘಟನೆಗಳು ತೋರಿಸುತ್ತವೆ ಎಂದು ಸುಪ್ರೀಂಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

1991ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಮಹಿಳೆ ಸೇರಿ ಮೂವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಂತರ ಪ್ರಕಟಿಸಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್, ಸಂಜೀವ್‌ ಖನ್ನಾ ಹಾಗೂ ಬಿ.ಆರ್‌.ಗವಾಯಿ ಅವರಿದ್ದ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಿತ್ತು.

ADVERTISEMENT

‘ಜಾತಿ ಹೆಸರಿನಲ್ಲಿ ನಡೆಯುವ ಇಂಥ ಘೋರ ಅಪರಾಧಗಳನ್ನು ನಾಗರಿಕ ಸಮಾಜ ಬಲವಾಗಿ ತಿರಸ್ಕರಿಸಬೇಕು’ ಎಂದೂ ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

‘ಮರ್ಯಾದೆಗೇಡು ಹತ್ಯೆಗಳನ್ನು ತಡೆಯಲು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಕುರಿತು ಕೋರ್ಟ್‌ ಈ ಹಿಂದೆಯೇ ಹಲವು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳನ್ನು ಯಾವುದೇ ವಿಳಂಬವಿಲ್ಲದೇ ಅನುಷ್ಠಾನಗೊಳಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.

‘ಇಂಥ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ರಕ್ಷಿಸುವಲ್ಲಿ ಸರ್ಕಾರಗಳ ಪಾತ್ರ ಮಹತ್ವದ್ದು. ಅದರಲ್ಲೂ, ಅಧಿಕಾರದಲ್ಲಿರುವವರು, ಹಣ ಮತ್ತು ತೋಳ್ಬಲದ ಪ್ರಭಾವ ಬೀರುವವರನ್ನು ಒಳಗೊಂಡ ಪ್ರಕರಣಗಳಲ್ಲಿ ಸಾಕ್ಷಿಗಳಿಗೆ ರಕ್ಷಣೆ ನೀಡುವುದು ಮುಖ್ಯ’ ಎಂದು ನ್ಯಾಯಪೀಠ ಹೇಳಿದೆ.

‘ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಲು ಅವರಿಗೆ ಸೂಕ್ತ ರಕ್ಷಣೆ ಸಿಗದಿರುವುದೇ ಕಾರಣ. ಇದು ಕಟು ವಾಸ್ತವ’ ಎಂದೂ ನ್ಯಾಯಪೀಠ ಹೇಳಿತು.

‘ಜಾತಿ ಆಧಾರಿತ ಆಚರಣೆಗಳು ಮತಾಂಧತೆಯನ್ನು ಪೋಷಿಸುತ್ತವೆ. ಇಂಥ ಆಚರಣೆಗಳು ಈಗಲೂ ಜೀವಂತವಾಗಿವೆ. ಎಲ್ಲರೂ ಸಮಾನ ಎಂಬ ಸಂವಿಧಾನದ ಆಶಯಕ್ಕೆ ಇಂಥ ಆಚರಣೆಗಳೇ ಅಡ್ಡಿಯಾಗುತ್ತಿವೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ

ಈ ಪ್ರಕರಣದ 23 ಅಪರಾಧಿಗಳಿಗೆ ಶಿಕ್ಷೆ ವಿಧಿಸಿ, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ನ್ಯಾಯಪೀಠ ಎತ್ತಿ ಹಿಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.