ADVERTISEMENT

ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ

ಪಿಟಿಐ
Published 1 ಫೆಬ್ರುವರಿ 2024, 15:42 IST
Last Updated 1 ಫೆಬ್ರುವರಿ 2024, 15:42 IST
ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಅರ್ಚಕರು ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ
ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಅರ್ಚಕರು ಪೂಜೆ ಸಲ್ಲಿಸಿದರು –ಪಿಟಿಐ ಚಿತ್ರ   

ವಾರಾಣಸಿ: ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಮೂರು ದಶಕಗಳ ಬಳಿಕ ಪೂಜೆ ಸಲ್ಲಿಸಲಾಗಿದೆ ಎಂದು ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರ ಪಾಂಡೆ ತಿಳಿಸಿದರು.  

ಕಾನೂನು ಹೋರಾಟದ ಮಹತ್ವದ ಬೆಳವಣಿಗೆಯಲ್ಲಿ ವಿವಾದಿತ ಮಸೀದಿಯ ನೆಲಮಹಡಿಯಲ್ಲಿರುವ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಜಿಲ್ಲಾ ನ್ಯಾಯಾಲಯವು ಅರ್ಚಕರಿಗೆ ಅವಕಾಶ ಕಲ್ಪಿಸಿ ಬುಧವಾರ ಆದೇಶ ಹೊರಡಿಸಿತ್ತು.

‘ವ್ಯಾಸ್‌ಜಿ ಕಾ ತಹಖಾನಾ’ವನ್ನು (ನೆಲಮಾಳಿಗೆ) ಬುಧವಾರ ರಾತ್ರಿ 10.30ಕ್ಕೆ ತೆರೆದು, ಪೂಜೆ ಸಲ್ಲಿಸಲಾಯಿತು. ಜಿಲ್ಲಾಡಳಿತವು ಎಲ್ಲಾ ಏರ್ಪಾಡುಗಳನ್ನು ಮಾಡಿಕೊಟ್ಟಿತ್ತು’ ಎಂದು ಪಾಂಡೆ ಹೇಳಿದರು. ‘ನಾನು ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಎಸ್‌. ರಾಜಲಿಂಗಂ ತಿಳಿಸಿದರು.

ADVERTISEMENT

ನೆಲಮಾಳಿಗೆಯನ್ನು ಸ್ವಚ್ಛಗೊಳಿಸಿದ ಬಳಿಕ ಲಕ್ಷ್ಮಿ ದೇವಿ ಮತ್ತು ಗಣೇಶ ವಿಗ್ರಹಗಳಿಗೆ ಆರತಿ ಬೆಳಗಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

‘ರಾತ್ರಿ 9.30ಕ್ಕೆ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್‌ನ ಸದಸ್ಯರನ್ನು ಕರೆಸಲಾಯಿತು ಮತ್ತು ಮಸೀದಿಯ ಎದುರಿಗಿರುವ ನಂದಿ ಪ್ರತಿಮೆಯ ಮುಂದಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದರು.

‘ನೆಲ ಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಏಳು ದಿನಗಳೊಳಗೆ ಏರ್ಪಾಡು ಮಾಡಿಕೊಡಬೇಕೆಂದು ನ್ಯಾಯಾಲಯವು ನಿರ್ದೇಶನ ನೀಡಿದೆ ಮತ್ತು ಮಸೀದಿ ಸಂಕೀರ್ಣದಲ್ಲಿ ಲೋಹದ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲು ಸೂಚಿಸಿದೆ’ ಎಂದು ಅವರು ತಿಳಿಸಿದರು.

‘ಯಾವುದೇ ಕಾನೂನು ನೆರವು ಲಭಿಸದಂತೆ ತಡೆಯುವ ಉದ್ದೇಶದಿಂದ ಯೋಗಿ ಆದಿತ್ಯನಾಥ ಸರ್ಕಾರವು ನ್ಯಾಯಾಲಯದ ಆದೇಶವನ್ನು ಆತುರದಿಂದ ಪಾಲಿಸಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ‘ಎಕ್ಸ್‌’ ಮಾಧ್ಯಮದಲ್ಲಿ ಟೀಕಿಸಿದ್ದಾರೆ.

‘ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವಾಗ ಕೆಲವು ಪ್ರಕ್ರಿಯೆಗಳನ್ನು ನಿರ್ವಹಿಸಬೇಕು. ಈಗ ನಾವು ನೋಡುತ್ತಿರುವುದು ಅಂತಹ ಸರಿಯಾದ ಪ್ರಕ್ರಿಯೆಯನ್ನು ಮೀರಿದ ಸಂಘಟಿತ ಪ್ರಯತ್ನವಷ್ಟೆ’ ಎಂದು ಅವರು ಹೇಳಿದ್ದಾರೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ನಡೆಸಿರುವ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸಿದ ಮರುದಿನ ನ್ಯಾಯಾಧೀಶರಾದ ಎ.ಕೆ. ವಿಶ್ವೇಶ ಅವರು ಈ ಆದೇಶ ನೀಡಿದ್ದರು.

ಔರಂಗಜೇಬನ ಆಡಳಿತದಲ್ಲಿ ಹಿಂದೂ ದೇವಾಲಯದ ಮೇಲೆ ಮಸೀದಿ ಕಟ್ಟಲಾಗಿತ್ತು ಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ

ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಸಮಿತಿಯು ಗುರುವಾರ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದೇ ವೇಳೆ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯ ಕುರಿತು ಯಾವುದೇ ಆದೇಶ ನೀಡುವ ಮೊದಲು ವಿಚಾರಣೆ ನಡೆಸಬೇಕೆಂದು ಕೋರಿ ಹಿಂದೂ ಅರ್ಜಿದಾರರ ಪರ ವಕೀಲರು ಕೂಡ ಹೈಕೋರ್ಟ್‌ಗೆ ಕೇವಿಯೆಟ್‌ ಸಲ್ಲಿಸಿದ್ದಾರೆ.

‘ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮಸೀದಿ ಸಮಿತಿ ಪರ ವಕೀಲರು ಕೋರಿದ್ದರು. ಆದರೆ ಸಾಮಾನ್ಯ ಪ್ರಕ್ರಿಯೆಯಂತೆ ಅರ್ಜಿಯನ್ನು ವಿಚಾರಣೆಗೆ ಪಟ್ಟಿಮಾಡುವುದಾಗಿ ಹೈಕೋರ್ಟ್‌ ತಿಳಿಸಿದೆ’ ಎಂದು ಮೂಲಗಳು ಹೇಳಿವೆ.

ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಮತ್ತು ಅರ್ಜಿಯ ವಿಚಾರಣೆ ನಡೆಯುವವರೆಗೂ ಯಾವುದೇ ಪ್ರಕ್ರಿಯೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಮಸೀದಿ ಸಮಿತಿಯು ಅರ್ಜಿಯಲ್ಲಿ ಕೋರಿದೆ.

ಇದಕ್ಕೂ ಮೊದಲು ವಾರಾಣಸಿ ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ ಮೊರೆಹೋಗುವಂತೆ ಸುಪ್ರೀಂ ಕೋರ್ಟ್ ಗುರುವಾರ ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಸಮಿತಿಗೆ ಸೂಚಿಸಿತ್ತು. ಈ ವಿಚಾರವಾಗಿ ತುರ್ತು ವಿಚಾರಣೆ ನಡೆಸಬೇಕೆಂದು ಸಮಿತಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಕೋರಿದ್ದರು. ಅಲಹಾಬಾದ್‌ ಹೈಕೋರ್ಟ್‌ಗೆ ತೆರಳುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಸೂಚಿಸಿರುವುದಾಗಿ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಮಸೀದಿ ಸಮಿತಿಗೆ ಮನವರಿಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.