ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಗ್ರಾಮೀಣ ಪ್ರದೇಶದ ಜನರು ಮನೆ ಬಳಕೆಗೆ ಮಾಡುವ ಖರ್ಚಿನಲ್ಲಿ ಹೆಚ್ಚಳವಾಗಿದೆ. ನಗರ ಪ್ರದೇಶದ ಜನರು ಮತ್ತು ಗ್ರಾಮೀಣ ಪ್ರದೇಶದ ಜನರು ಮನೆ ಬಳಕೆಗೆ ಮಾಡುವ ಖರ್ಚಿನ ನಡುವೆ ಇದ್ದ ಅಂತರ ಗಣನೀಯವಾಗಿ ಕಡಿಮೆಯಾಗಿದೆ ಎಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2023–24ನೇ ಸಾಲಿನ ‘ಮನೆಯೊಂದರ ಬಳಕೆ ವೆಚ್ಚ ಸಮೀಕ್ಷೆ’ಯ (ಎಚ್‌ಸಿಎಎಸ್) ವರದಿ ಹೇಳಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ಈ ಸಮೀಕ್ಷೆಯನ್ನು ನಡೆಸಿದೆ.
2022–23ರ ಸಮೀಕ್ಷೆ ಪ್ರಕಾರ ಗ್ರಾಮೀಣ ಕುಟುಂಬವೊಂದು ತಿಂಗಳಿಗೆ ₹3,773 ವೆಚ್ಚ ಮಾಡುತ್ತಿತ್ತು. ಈ ಸಾಲಿನಲ್ಲಿ ಈ ಮೊತ್ತವು ₹4,122 ಏರಿಕೆಯಾಗಿದೆ. ಅಂದರೆ, ಕಳೆದ ಬಾರಿಯ ಹೋಲಿಕೆಯಲ್ಲಿ ಗ್ರಾಮೀಣ ಕುಟುಂಬವೊಂದರ ವೆಚ್ಚ ಪ್ರಮಾಣವು ಶೇ 9ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ಕುಟುಂಬವೊಂದು ಪ್ರತಿ ತಿಂಗಳು ₹6,459 ವೆಚ್ಚ ಮಾಡುತ್ತಿದ್ದರೆ, 2024ರಲ್ಲಿ ಈ ಮೊತ್ತವು ₹6,996ಕ್ಕೆ ಏರಿಕೆಯಾಗಿದೆ. ಅಂದರೆ, ವೆಚ್ಚ ಪ್ರಮಾಣವು ಶೇ 8ಕ್ಕೆ ಏರಿಕೆ ಕಂಡಿದೆ. ನಗರ ಹಾಗೂ ಗ್ರಾಮೀಣ ಭಾಗದ ವೆಚ್ಚದ ಹೋಲಿಕೆ ಮಾಡಿದರೆ ನಗರದ ಕುಟುಂಬಗಳೇ ಈಗಲೂ ಹೆಚ್ಚಿನ ವೆಚ್ಚ ಮಾಡುತ್ತಿವೆ. ಆದರೆ ವೆಚ್ಚ ಏರಿಕೆ ಪ್ರಮಾಣವು ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ ಎಂಬುದು ಗಮನಾರ್ಹ.
* ಗ್ರಾಮೀಣ ಕುಟುಂಬಗಳಿರಲಿ, ನಗರ ಕುಟುಂಬಗಳಿರಲಿ ಆಹಾರೇತರ ಪದಾರ್ಥಗಳಿಗೇ ಹೆಚ್ಚಿನ ವೆಚ್ಚ ಮಾಡುತ್ತಿವೆ. ಶಿಕ್ಷಣಕ್ಕೆ ಕುಟುಂಬಗಳು ಮಾಡುತ್ತಿರುವ ವೆಚ್ಚ ಗಮನಿಸಿದರೆ, ಗ್ರಾಮೀಣ ಕುಟುಂಬಗಳು ಈ ವಿಷಯಕ್ಕೆ ಹೆಚ್ಚಿನ ವೆಚ್ಚ ಮಾಡುತ್ತಿಲ್ಲ. ಬಟ್ಟೆ, ಚಾದರ ಮತ್ತು ಚಪ್ಪಲಿ ಖರೀದಿಗೆ ನಗರ ಪ್ರದೇಶದ ಜನರು ಹೆಚ್ಚಿನ ಪ್ರಾಧಾನ್ಯ ನೀಡಿಲ್ಲ
* ಆಹಾರ ಪದಾರ್ಥಗಳ ವಿಷಯದಲ್ಲಿ ನಗರ ಹಾಗೂ ಗ್ರಾಮೀಣ ಜನರ ವೆಚ್ಚವು ಕಡಿಮೆಯೇ ಇದೆ. ಅಡುಗೆ ಎಣ್ಣೆಗಾಗಿ ನಗರ ಪ್ರದೇಶದ ಜನರು ತೀರಾ ಕಡಿಮೆ ಪ್ರಮಾಣದ ವೆಚ್ಚ ಮಾಡುತ್ತಿವೆ. ಗ್ರಾಮೀಣ ಭಾಗದ ಜನರು ನಗರದ ಜನರಿಗಿಂತ ತುಸು ಹೆಚ್ಚು. ಇನ್ನು ಪಾನೀಯಗಳ ವಿಚಾರದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಜನರು ಹೆಚ್ಚಿನ ವೆಚ್ಚ ಮಾಡುತ್ತಿದ್ದಾರೆ
ದಕ್ಷಿಣ ಭಾರತ: ಕರ್ನಾಟಕದ ಸ್ಥಿತಿ ಏನು?
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕುಟುಂಬಗಳು ಮಾಡುವ ವೆಚ್ಚವು ಹೆಚ್ಚು. ನಗರ ಪ್ರದೇಶದ ಕುಟುಂಬಗಳ ಸರಾಸರಿ ವೆಚ್ಚ ₹6,996 ಇದ್ದರೆ ಗ್ರಾಮೀಣ ಪ್ರದೇಶದ ₹4,122 ಇದೆ. ನಗರ ಕುಟುಂಬಗಳ ವೆಚ್ಚದ ಸರಾಸರಿಯಲ್ಲಿ ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕವು 3ನೇ ಸ್ಥಾನದಲ್ಲಿದ್ದರೆ, ಗ್ರಾಮೀಣ ಕುಟುಂಬಗಳ ವೆಚ್ಚದ ಸರಾಸರಿಯಲ್ಲಿ ಕರ್ನಾಟಕವು ಕೊನೆಯ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.