ADVERTISEMENT

ಬುಡಕಟ್ಟು ಬಾಲಕಿಯ ಶೈಕ್ಷಣಿಕ ಭವಿಷ್ಯ ರೂಪಿಸಿದ ಶಿಕ್ಷಕಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 20:59 IST
Last Updated 21 ಮೇ 2025, 20:59 IST
   

ಚೆನ್ನೈ: ಶಿಕ್ಷಕಿಯೊಬ್ಬರು ಕಾಳಜಿ ತೋರಿ ‍ಪ್ರೋತ್ಸಾಹಿಸಿದ ಪರಿಣಾಮ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯೊಬ್ಬರು ಶೈಕ್ಷಣಿಕವಾಗಿ ಸಾಧನೆ ಮಾಡಿ, ಮುಂದಿನ ಹಂತ ಪ್ರವೇಶಿಸಲು ಪ್ರೇರೇಪಣೆ ನೀಡಿದೆ.

ಆ ಬಾಲಕಿಯ ಹೆಸರು ದುರ್ಗಾ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಸರ್ಕಾರಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿನಿ. ಶಿಕ್ಷಕಿ ನೀಡಿದ ಪ್ರೋತ್ಸಾಹದ ಕಾರಣ ಈ ಬಾರಿಯ 10ನೇ ತರಗತಿ ಪರೀಕ್ಷೆಯಲ್ಲಿ ಈ ಬುಡಕಟ್ಟು ವಿದ್ಯಾರ್ಥಿನಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಬಾಲಕಿಯ ಪೋಷಕರು ಪ್ರತಿ ವರ್ಷ ನಾಲ್ಕು ತಿಂಗಳು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಬಾಲಕಿಯ ಶಿಕ್ಷಣ ಮೊಟಕಾಗುತ್ತಿತ್ತು. ಹೀಗೆ 1ರಿಂದ 8ನೇ ತರಗತಿವರೆಗೆ ಪ್ರತಿ ವರ್ಷ ನಾಲ್ಕು ತಿಂಗಳು ಬಾಲಕಿ ಶಿಕ್ಷಣದಿಂದ ವಂಚಿತಳಾಗಿದ್ದಳು. 

ADVERTISEMENT

ಬಾಲಕಿ ಪದೇ ಪದೇ ಶಾಲೆಗೆ ಗೈರಾಗುತ್ತಿದ್ದುದನ್ನು ಗಮನಿಸಿದ ಗಣಿತ ಶಿಕ್ಷಕಿ ಮಹಾಲಕ್ಷಿ, ಬಾಲಕಿಯ ಪೋಷಕರ ಜತೆ ಮಾತುಕತೆ ನಡೆಸಿದರು. ವಿದ್ಯಾರ್ಥಿನಿಲಯದಲ್ಲಿ ಇದ್ದುಕೊಂಡು 9ನೇ ತರಗತಿ ಓದಲು ದುರ್ಗಾಳಿಗೆ ಅನುವು ಮಾಡಿಕೊಡುವಂತೆ ಅವರು ಪೋಷಕರನ್ನು ಒಪ್ಪಿಸಿದರು. ಇದರಿಂದಾಗಿ, ಪೋಷಕರು ಕೂಲಿಗಾಗಿ ಹೊರ ಊರುಗಳಿಗೆ ತೆರಳಿದರೂ ಬಾಲಕಿಯ ವಿದ್ಯಾಭ್ಯಾಸಕ್ಕೆ ಧಕ್ಕೆಯಾಗಲಿಲ್ಲ. ಬಾಲಕಿಯೂ ವಿದ್ಯಾಭ್ಯಾಸದತ್ತ ಹೆಚ್ಚಿನ ಆಸಕ್ತಿ ತೋರಿ, 10ನೇ ತರಗತಿಯಲ್ಲಿ ಶೇ 60ರಷ್ಟು ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾಳೆ.

‘500 ಅಂಕಗಳಿಗೆ 301 ಅಂಕಗಳನ್ನು ಪಡೆದು ದುರ್ಗಾ ತೇರ್ಗಡೆ ಆಗಿದ್ದಾಳೆ. ಅಲ್ಲದೆ ಶಿಕ್ಷಣ ಮುಂದುವರಿಸಲೂ ಬಯಸಿದ್ದಾಳೆ. ಇದು ನನಗೆ ಹೆಚ್ಚು ಖುಷಿ ನೀಡಿದೆ’ ಎಂದು ಶಿಕ್ಷಕಿ ಮಹಾ ಲಕ್ಷ್ಮಿ ಸಂತಸ ವ್ಯಕ್ತಪಡಿಸಿದರು.  

‘ವಿದ್ಯಾರ್ಥಿನಿಯ ಸಾಮರ್ಥ್ಯ ಎಂಥದ್ದು ಎಂಬುದು ಶಿಕ್ಷಕಿಯಾಗಿ ನನಗೆ ತಿಳಿದಿತ್ತು. ಅವಳು ಗಣಿತ ವಿಷಯದಲ್ಲಿ ಚೆನ್ನಾಗಿದ್ದಳು, ನಾನು ಪ್ರೋತ್ಸಾಹಿಸಿದೆ. ಈಗ ಅವಳ ಸಾಧನೆಯಿಂದ ನನಗೆ ಸಂತಸವಾಗಿದೆ. ಅವಳು ಶಾಲೆಗೂ ಹೆಮ್ಮೆ ತಂದಿದ್ದಾಳೆ’ ಎಂದು ಅವರು ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.