ADVERTISEMENT

ದೇಶದ ಮೊದಲ ಮತದಾರನನ್ನು ಚುನಾವಣಾ ಆಯೋಗ ಪತ್ತೆ ಮಾಡಿದ್ದು ಹೀಗೆ...

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 6:18 IST
Last Updated 29 ಮಾರ್ಚ್ 2019, 6:18 IST
ಶ್ಯಾಮ್‌ ಶರಣ್‌ ನೇಗಿ
ಶ್ಯಾಮ್‌ ಶರಣ್‌ ನೇಗಿ   

ಶಿಮ್ಲಾ:ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊತ್ತಮೊದಲು ಮತ ಚಲಾಯಿಸಿದವರು ಯಾರು ಎಂಬ ಪ್ರಶ್ನೆಗೆ ಕೆಲ ವರ್ಷಗಳ ಹಿಂದೆ ಉತ್ತರ ದೊರೆತಿತ್ತು. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್‌ ಶರಣ್‌ ನೇಗಿ (102) ಎಂಬುವವರೇ ದೇಶದ ಮೊದಲ ಮತದಾರ ಎಂಬುದನ್ನು ಚುನಾವಣಾ ಆಯೋಗ ಪತ್ತೆಮಾಡಿತ್ತು.

ನೇಗಿ ಅವರನ್ನು ಆಯೋಗ ಪತ್ತೆಹಚ್ಚಿದ್ದು ಹೇಗೆ ಎಂಬುದಕ್ಕೂ ಈಗ ಉತ್ತರ ದೊರೆತಿದೆ. 2007ರಲ್ಲಿ ಐಎಎಸ್‌ ಅಧಿಕಾರಿ ಮನೀಶಾ ನಂದಾ (ಈಗ ಹಿಮಾಚಲ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಅವರಿಗೆ ನೇಗಿ ಕುರಿತು ಮಾಹಿತಿ ದೊರೆತಿತ್ತು.

ADVERTISEMENT
ಮನೀಶಾ ನಂದಾ

‘ಭಾರಿ ಹಿಮಪಾತವಾಗುವ ಹಿನ್ನೆಲೆಯಲ್ಲಿಕಿನ್ನೌರ್‌ನಲ್ಲಿ ದೇಶದ ಇತರ ಕಡೆಗಳಿಂದ ಮೊದಲು ಮತದಾನ ನಡೆಯುತ್ತದೆ ಎಂಬುದು ನನಗೆ ತಿಳಿದಿತ್ತು. ಹೀಗಾಗಿ ಅಲ್ಲಿನ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದೆ. ಒಂದು ದಿನ ಮತದಾರರ ನೋಂದಣಿ ಪಟ್ಟಿ ಪರಿಶೀಲಿಸುವಾಗ 90 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರು ಇರುವುದನ್ನು ಗಮನಿಸಿದೆ. ಆ ಪೈಕಿ ನೇಗಿ ಅವರ ವಯಸ್ಸಿ ನನ್ನ ಗಮನ ಸೆಳೆಯಿತು. ತಕ್ಷಣವೇ ನೇಗಿ ಅವರನ್ನು ಭೇಟಿ ಮಾಡುವಂತೆ ಚುನಾವಣಾ ಕಚೇರಿ ಅಧಿಕಾರಿಗಳಿಗೆ ಸೂಚಿಸಿದೆ’ ಎಂಬಮನೀಶಾ ನಂದಾ ಹೇಳಿಕೆ ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಆಗ ಕಿನ್ನೌರ್‌ನ ಉಪ ಜಿಲ್ಲಾಧಿಕಾರಿಯಾಗಿದ್ದ ಎಂ. ಸುಧಾ ದೇವಿ ಅವರು ಕಲ್ಪಾಗೆ ತೆರಳಿ ನೇಗಿ ಅವರನ್ನು ಭೇಟಿಯಾದರು. ಆ ಸಂದರ್ಭ ತಾನು ದೇಶದ ಮೊದಲ ಮತದಾರ ಎಂದೂ ಒಂದೇ ಒಂದು ಬಾರಿಯೂ ಮತದಾನ ಮಾಡುವುದನ್ನು ತಪ್ಪಿಸಿಕೊಂಡಿಲ್ಲ ಎಂದು ನೇಗಿ ಹೇಳಿದ್ದರು. ಹಿಮಪಾತದ ಕಾರಣ ದೇಶದ ಇತರೆಡೆಗಳಿಂದ ಮೊದಲು ಚುನಾವಣೆ ನಡೆದಿತ್ತು ಎಂದೂ ಅವರು ತಿಳಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐದು ತಿಂಗಳು ಮೊದಲು ನಡೆದಿತ್ತು ಚುನಾವಣೆ

ದೇಶದ ಮೊದಲ ಸಾರ್ವತ್ರಿಕ ಚುನಾವಣೆ 1952ರ ಫೆಬ್ರುವರಿಯಲ್ಲಿ ನಡೆದಿತ್ತು. ಆದರೆ ಹಿಮಪಾತದ ಕಾರಣ ಐದು ತಿಂಗಳು ಮೊದಲೇ, ಅಂದರೆ 1951ರ ಸೆಪ್ಟೆಂಬರ್‌ನಲ್ಲಿಕಿನ್ನೌರ್‌ನಲ್ಲಿ ಮತದಾನ ನಡೆದಿತ್ತು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನೇಗಿ ಅವರೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಬೆಳಿಗ್ಗೆಯೇ ಮತದಾನ ಮಾಡಿ ನಂತರಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಅವರು ಅಧಿಕಾರಿಗಳನ್ನು ವಿನಂತಿಸಿದ್ದರು. ಇದರಿಂದಾಗಿ ಮೊತ್ತಮೊದಲು ಮತ ಚಲಾಯಿಸುವ ಅವಕಾಶ ಅವರಿಗೆ ದೊರೆತಿತ್ತು ಎಂಬುದನ್ನು ಅವರ ಮಗ ಚಂದ್ರ ಪ್ರಕಾಶ್ ತಿಳಿಸಿದ್ದರು.

‘ಈ ಮಾಹಿತಿಯ ಆಧಾರದಲ್ಲಿ ನಾಲ್ಕು ತಿಂಗಳು ದಾಖಲೆಗಳನ್ನು ಮತ್ತು ಕಡತಗಳನ್ನು ಪರಿಶೀಲಿಸಿದೆವು. ದೆಹಲಿಯಲ್ಲಿರುವಚುನಾವಣಾ ಆಯೋಗದ ಪ್ರಧಾನ ಕಚೇರಿಯಲ್ಲಿಯೂ ದಾಖಲೆಗಳನ್ನು ಹುಡುಕಿ ಮಾಹಿತಿ ಕಲೆಹಾಕಲಾಯಿತು. ದೇಶದ ಮೊದಲ ಮತ ಚಲಾಯಿಸಿದವರನ್ನು ಹುಡುಕಿದ್ದು ಆ ವಿಷಯದಲ್ಲಿ ಪಿಎಚ್‌ಡಿ ಮಾಡಿದಂತಹ ಅನುಭವ ನೀಡಿದೆ’ ಎಂದುನಂದಾ ಹೇಳಿದ್ದಾರೆ.

16ನೇ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಜತೆ ನೇಗಿ

1917ರ ಜುಲೈ 1ರಂದು ಕಲ್ಪಾ ಗ್ರಾಮದಲ್ಲಿ ಜನಿಸಿರುವ ನೇಗಿ ಅವರುಸರ್ಕಾರಿ ಶಿಕ್ಷಕರಾಗಿದ್ದು 1975ರಲ್ಲಿ ನಿವೃತ್ತರಾಗಿದ್ದಾರೆ. 2012ರಲ್ಲಿ16ನೇ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರುಕಲ್ಪಾಗೆ ತೆರಳಿ ನೇಗಿ ಅವರನ್ನು ಭೇಟಿ ಮಾಡಿದ್ದರು.

2014ರ ಲೋಕಸಭೆ ಚುನಾವಣೆ ವೇಳೆಗೂಗಲ್‌ ಇಂಡಿಯಾ ಸಂಸ್ಥೆಯ ‘ಮತದಾನ ಸಂಕಲ್ಪ ಮಾಡಿ’ ಎಂಬ ಅಭಿಯಾನದಡಿ ನೇಗಿ ಅವರ ವಿಡಿಯೊ ಪ್ರಕಟಿಸಿದ್ದು ಜನಪ್ರಿಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.