ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಾರತೀಯ ಚುನಾವಣಾ ಆಯೋಗ
ನವದೆಹಲಿ: ಸಂವಿಧಾನ ಶಿಲ್ಪಿ ಎಂದು ಪರಿಗಣಿಸಲ್ಪಡುವ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಚುನಾವಣಾ ಆಯೋಗದ ರಚನೆಗೂ ಕಾರಣಕರ್ತರು.
ಸಾಂವಿಧಾನಿಕ ಸಭೆಯಲ್ಲಿ ತಿದ್ದುಪಡಿ ತಂದ ಅವರು ಸ್ವತಂತ್ರ ಸಂಸ್ಥೆಯಾಗಿ ಚುನಾವಣಾ ಆಯೋಗ ರಚನೆಗೆ ಕಾರಣರಾದರು. ಡಾ. ಅಂಬೇಡ್ಕರ್ ಅವರ ಆ ದೂರದೃಷ್ಟಿಯ ಫಲವಾಗಿ ಸ್ವತಂತ್ರ ಸಂಸ್ಥೆಯಾಗಿ ಆಯೋಗ ರಚನೆಗೊಂಡು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭಾ, ವಿಧಾನಸಭಾ, ರಾಜ್ಯಸಭಾ ಮತ್ತು ವಿಧಾನ ಪರಿಷತ್‌ಗಳಿಗೆ ಚುನಾವಣೆ ನಡೆಯಲು ಕಾರಣರಾದರು.
1949ರ ನ. 26ರಂದು ಸಂವಿಧಾನಕ್ಕೆ ಈ ತಿದ್ದುಪಡಿ ತರಲಾಯಿತು. 1950ರ ಜ. 25ರಂದು ಚುನಾವಣಾ ಆಯೋಗ ರಚನೆಗೊಂಡಿತು. ಜ. 26ರಂದು ಭಾರತ ಗಣರಾಜ್ಯವಾಯಿತು.
ಅಂಬೇಡ್ಕರ್ ಅವರು ಈ ತಿದ್ದುಪಡಿಯನ್ನು ಮಂಡಿಸುವ ಮೊದಲು 289ನೇ ವಿಧಿಯಡಿ ಕೇಂದ್ರ ಮತ್ತು ರಾಜ್ಯಗಳಿಗೆ ಪ್ರತ್ಯೇಕ ಚುನಾವಣಾ ಆಯೋಗ ರಚಿಸುವ ಪ್ರಸ್ತಾಪ ಕರಡಿನಲ್ಲಿತ್ತು. ಕೇಂದ್ರ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿ, ರಾಜ್ಯಗಳ ಚುನಾವಣಾ ಆಯೋಗದ ಆಯುಕ್ತರನ್ನು ರಾಜ್ಯಪಾಲರು ನೇಮಿಸಬೇಕು ಎಂದು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ನಡವಳಿಕೆಯಲ್ಲಿ ದಾಖಲಾಗಿದೆ.
‘ಚುನಾವಣಾ ವ್ಯವಸ್ಥೆಯು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರಬೇಕು. ಮುಖ್ಯ ಚುನಾವಣಾ ಆಯುಕ್ತರ ನೇಮಕವನ್ನು ರಾಷ್ಟ್ರಪತಿ ಮಾಡಬೇಕು’ ಎಂಬ ಪ್ರಸ್ತಾವನೆಯನ್ನು ಅಂಬೇಡ್ಕರ್ ಮಂಡಿಸಿದರು.
ಸಾಂವಿಧಾನಿಕ ಸಭೆಗೂ ಪೂರ್ವದಲ್ಲಿ ಡಾ. ಅಂಬೇಡ್ಕರ್ ಮಂಡಿಸಿದ್ದ 324ನೇ ವಿಧಿಯಲ್ಲಿ ಕೇಂದ್ರೀಕೃತ ಚುನಾವಣಾ ನಿಯಂತ್ರಣ ವ್ಯವಸ್ಥೆಯ ಪ್ರಸ್ತಾವವನ್ನು ಮಂಡಿಸಲಾಗಿತ್ತು. ಒಂದು ಸಂಸ್ಥೆಯು ಕೇಂದ್ರ ಮತ್ತು ರಾಜ್ಯಗಳ ಚುನಾವಣಾ ವ್ಯವಸ್ಥೆಯನ್ನು ನಿರ್ವಹಿಸುವುದು ಇದರ ಉದ್ದೇಶವಾಗಿತ್ತು.
1951ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಬಾಂಬೆ ಮತ್ತು ಪಟ್ನಾಗೆ ಆರು ತಿಂಗಳ ಅವಧಿಗೆ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಯಿತು. ಅದರ ನಂತರದಲ್ಲಿ ಮತ್ತೆ ಅಂಥದ್ದು ಜಾರಿಯಾಗಲಿಲ್ಲ. ಸದ್ಯ ರಾಜ್ಯ ಮುಖ್ಯ ಚುನಾವಣಾಧಿಕಾರಿಯು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯೋಗದ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಹಳಷ್ಟು ಪ್ರಕರಣಗಳಲ್ಲಿ 324ನೇ ವಿಧಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಇದು ಚುನಾವಣಾ ಆಯೋಗದ ವಿಶಾಲ ಅಧಿಕಾರ ವ್ಯಾಪ್ತಿಯಲ್ಲಿದೆ ಎಂದು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.