ADVERTISEMENT

‘ಸ್ಮಾರ್ಟ್‌ಸಿಟಿ ಕೊಚ್ಚಿ’ ಬಿಕ್ಕಟ್ಟು ಬಗೆಹರಿಸಿದ್ದ ಸ್ವಪ್ನಾ ಸುರೇಶ್‌!

ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಮಧ್ಯಪ್ರವೇಶದಿಂದ ದೂರವಾದ ಅಡೆತಡೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 12:29 IST
Last Updated 19 ಅಕ್ಟೋಬರ್ 2020, 12:29 IST
ಸ್ವಪ್ನಾ ಸುರೇಶ್‌
ಸ್ವಪ್ನಾ ಸುರೇಶ್‌   

ತಿರುವನಂತಪುರ: ಕೇರಳದ ಪ್ರಮುಖ ಐಟಿ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ‘ಸ್ಮಾರ್ಟ್‌ಸಿಟಿ ಕೊಚ್ಚಿ’ ಯೋಜನೆಗೆ 2017ರಲ್ಲಿ ಎದುರಾಗಿದ್ದ ಬಿಕ್ಕಟ್ಟನ್ನು, ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್‌ ಬಗೆಹರಿಸಿದ್ದರು ಎನ್ನುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್‌ ಎದುರು ಹೇಳಿಕೆ ದಾಖಲಿಸಿರುವ ಐಎಎಸ್‌ ಅಧಿಕಾರಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್‌, ‘ಯುಎಇ ಕಾನ್ಸುಲ್‌ ಜನರಲ್‌ ಅವರಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಪ್ನಾ, ಈ ಬಿಕ್ಕಟ್ಟು ಬಗೆಹರಿಸಲು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿದ್ದರು’ ಎಂದು ತಿಳಿಸಿದ್ದಾರೆ.

ಯೋಜನೆಗೆ ಹೆಚ್ಚಿನ ಬಂಡವಾಳವನ್ನು ಯುಎಇಯ ದುಬೈ ಹೋಲ್ಡಿಂಗ್ಸ್‌ನ ಸಹಸಂಸ್ಥೆ ಟೆಕಾಂ ಇನ್‌ವೆಸ್ಟ್‌ಮೆಂಟ್ಸ್‌ ಹೂಡಿತ್ತು. ಶೇ 84ರಷ್ಟು ಷೇರುಗಳು ಇದರ ಬಳಿ ಇದ್ದರೆ, ಶೇ 16 ಕೇರಳ ಸರ್ಕಾರದ್ದಾಗಿತ್ತು. ದುಬೈ ಹೋಲ್ಡಿಂಗ್ಸ್‌ ಕಂಪನಿಯ ಆಡಳಿತವು ಬದಲಾವಣೆಯಾದ ಸಂದರ್ಭದಲ್ಲಿ ಯೋಜನೆಗೆ ಬಿಕ್ಕಟ್ಟು ಎದುರಾಗಿತ್ತು. ಆಡಳಿತ ಬದಲಾವಣೆ ಸಂದರ್ಭದಲ್ಲಿ ಟೆಕಾಂ ಇನ್‌ವೆಸ್ಟ್‌ಮೆಂಟ್ಸ್‌ ಅನ್ನು ತೆಗೆದು ಹಾಕಲಾಯಿತು. ಈ ಸಂದರ್ಭದಲ್ಲಿ ಕಂಪನಿಯ ಬಳಿ ಇದ್ದ ಷೇರುಗಳು ದುಬೈ ಹೋಲ್ಡಿಂಗ್ಸ್‌ಗೆ ವರ್ಗಾವಣೆಯಾಯಿತು. ಸ್ಮಾರ್ಟ್‌ಸಿಟಿ ಕೊಚ್ಚಿ ಯೋಜನೆಯು ವಿಳಂಬವಾಗುವ ಕಾರಣ ಈ ಯೋಜನೆಯಿಂದ ದುಬೈ ಹೋಲ್ಡಿಂಗ್ಸ್‌ ಹಿಂದೆ ಸರಿಯಬಹುದು ಎನ್ನುವ ವರದಿಗಳು ಪ್ರಕಟವಾಗಿತ್ತು.

ADVERTISEMENT

ಆದರೆ, ನಂತರದಲ್ಲಿ ಕೇರಳ ಸರ್ಕಾರ ಹಾಗೂ ದುಬೈ ಹೋಲ್ಡಿಂಗ್ಸ್‌ ನಡುವೆ ನಡೆದ ಮಾತುಕತೆಯಿಂದ ಬಿಕ್ಕಟ್ಟು ಬಗೆಹರಿದಿತ್ತು. ಯೋಜನೆಯ ಮೊದಲ ಹಂತವನ್ನು ಆರಂಭಿಸಿರುವ ಕೇರಳದ ಎಲ್‌ಡಿಎಫ್‌ ಸರ್ಕಾರ ಇದನ್ನು ತಮ್ಮ ಪ್ರಮುಖ ಸಾಧನೆ ಎಂದು ಬಿಂಬಿಸುತ್ತಿದೆ.

‘ಯೋಜನೆಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲುಸ್ವಪ್ನಾ ಸುರೇಶ್‌ ಅವರು ಯುಎಇ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಬೇಕು ಎಂದು ಅವರ ಜೊತೆ ಮಾತುಕತೆ ನಡೆಸಿದ್ದೆ. ಇದು ಸಫಲವಾದ ನಂತರದಲ್ಲಿ ಕೇರಳ ಮೂಲದ ನವೋದ್ಯಮಗಳಿಗೆ ಹಾಗೂ ಐಟಿ ಕಂಪನಿಗಳಿಗೆ ಯುಎಇಯಲ್ಲಿ ಅವಕಾಶಗಳನ್ನು ಕಲ್ಪಿಸುವ ಕುರಿತು ಸ್ವಪ್ನಾ ಜೊತೆ ನಿರಂತರ ಸಂಪರ್ಕದಲ್ಲಿದ್ದೆ’ ಎಂದು ಶಿವಶಂಕರ್‌ ಉಲ್ಲೇಖಿಸಿದ್ದಾರೆ.

ಅ.23ರವರೆಗೆ ಶಿವಶಂಕರ್‌ ಬಂಧನಕ್ಕೆ ತಡೆ

ಅ.23ರವರೆಗೆ ಶಿವಶಂಕರ್‌ ಅವರ ಬಂಧನಕ್ಕೆ ಕೇರಳ ಹೈಕೋರ್ಟ್‌ ಸೋಮವಾರ ತಡೆ ನೀಡಿದೆ.

ಶಿವಶಂಕರ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ತೀರ್ಪು ನೀಡಿದ್ದು, ಅ.23ರೊಳಗಾಗಿ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್‌ಗೆ ಸೂಚಿಸಿದೆ.

ಎದೆನೋವಿನ ಕಾರಣ, ಪ್ರಸ್ತುತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಶಂಕರ್‌, ‘ಹಲವು ತನಿಖಾ ಸಂಸ್ಥೆಗಳು ನನ್ನನ್ನು 90ಕ್ಕೂ ಅಧಿಕ ಗಂಟೆ ಪ್ರಶ್ನಿಸಿವೆ. ಇಷ್ಟು ತನಿಖೆಯ ಬಳಿಕವೂ ಯಾವ ಸಂಸ್ಥೆಯೂ ತನ್ನನ್ನು ಆರೋಪಿ ಎಂದು ಹೇಳಿಲ್ಲ. ರಾಜಕೀಯ ಕಾರಣ ಹಾಗೂ ಇತರೆ ಹಿತಾಸಕ್ತಿಗಾಗಿ ಕಸ್ಟಮ್ಸ್‌ನವರು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಸ್ಟಡಿಗೆ ಪಡೆಯುವ ಹುನ್ನಾರ ನಡೆಸುವಂತಿದೆ. ತನಿಖಾ ಸಂಸ್ಥೆಗಳ ಎಲ್ಲಾ ನಿರ್ದೇಶನಗಳನ್ನು ನಾನು ಪಾಲಿಸುತ್ತಿದ್ದು, ಪರಾರಿಯಾಗುವ ಯಾವ ಉದ್ದೇಶವೂ ಇಲ್ಲ’ ಎಂದು ಅರ್ಜಿಯಲ್ಲಿ ಶಿವಶಂಕರ್‌ ಉಲ್ಲೇಖಿಸಿದ್ದರು.

ಅ.23ರವರೆಗೆ ಶಿವಶಂಕರ್‌ ಅವರನ್ನು ಬಂಧಿಸಬಾರದು ಎಂದು ಕಳೆದ ವಾರ ಜಾರಿ ನಿರ್ದೇಶನಾಲಯಕ್ಕೆ(ಇ.ಡಿ)ಹೈ ಕೋರ್ಟ್‌ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.