ADVERTISEMENT

ಹಿಮಾಚಲ ಪ್ರದೇಶ: ವಿಧಾನಸಭೆ ದ್ವಾರದಲ್ಲಿ ಖಾಲಿಸ್ತಾನಿ ಧ್ವಜ

​ಪ್ರಜಾವಾಣಿ ವಾರ್ತೆ
Published 9 ಮೇ 2022, 2:08 IST
Last Updated 9 ಮೇ 2022, 2:08 IST

ಧರ್ಮಶಾಲಾ (ಹಿಮಾಚಲ ಪ್ರದೇಶ) (ಪಿಟಿಐ): ‘ರಾಜ್ಯ ವಿಧಾನಸಭೆಯ ಆವರಣದ ಮುಖ್ಯದ್ವಾರದ ಹೊರ ಭಾಗದಲ್ಲಿ ಖಾಲಿಸ್ತಾನಿ ಧ್ವಜಗಳನ್ನು ಕಟ್ಟಲಾಗಿತ್ತು ಮತ್ತು ಆವರಣದ ಗೋಡೆಯ ಮೇಲೆ ಖಾಲಿಸ್ತಾನಿ ಪರ ಘೊಷಣೆಗಳನ್ನು ಬರೆಯಲಾಗಿತ್ತು. ಧ್ವಜಗಳನ್ನು ತೆಗೆದು, ಬರಹವನ್ನು ಅಳಿಸಲಾಗಿದೆ’ ಎಂದು ಹಿಮಾಚಲ ಪ್ರದೇಶ ಪೊಲೀಸರು ಹೇಳಿದ್ದಾರೆ.

ಧರ್ಮಶಾಲಾದಲ್ಲಿ ಇರುವ ವಿಧಾನಸಭೆ ಕಟ್ಟಡದಲ್ಲಿ ಚಳಿಗಾಲದ ಅಧಿವೇಶನವನ್ನು ಮಾತ್ರ ನಡೆಸಲಾಗುತ್ತದೆ. ಆಗ ಮಾತ್ರ ವಿಧಾನಸಭೆಗೆ ಬಿಗಿಭದ್ರತೆ ಒದಗಿಸಲಾಗುತ್ತದೆ. ಉಳಿದಂತೆ ಸಾಮಾನ್ಯ ಭದ್ರತೆ ಮಾತ್ರ ಇರುತ್ತದೆ. ‘ಶನಿವಾರ ತಡ ರಾತ್ರಿ ಅಥವಾ ಭಾನುವಾರ ನಸುಕಿನಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕೃತ್ಯವನ್ನು ಖಂಡಿಸಿಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್‌ ಅವರು ಟ್ವೀಟ್‌ ಮಾಡಿದ್ದಾರೆ. ‘ಇದು ಹೇಡಿತನದ ಕೃತ್ಯ. ತಪ್ಪಿತಸ್ಥರನ್ನು ಆದಷ್ಟು ಬೇಗ ಸೆರೆಹಿಡಿಯಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

ಈ ಘಟನೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ. ‘ವಿಧಾನಸಭೆಯ ದ್ವಾರದಲ್ಲಿ ಖಾಲಿಸ್ತಾನಿ ಧ್ವಜಗಳು ಹಾರಾಡಿದ್ದು ದುರದೃಷ್ಟಕರ. ಘಟನೆ ನಡೆದ ವೇಳೆ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ ಮತ್ತು ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಇರದೇ ಇದ್ದದ್ದು ಆಡಳಿತ ಮತ್ತು ಭದ್ರತಾ ಸಂಸ್ಥೆಗಳ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟುವಂತೆ ಮಾಡಿವೆ’ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ಸುಧೀರ್‌ ಶರ್ಮಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.