ADVERTISEMENT

ಹೆಚ್ಚು ಸವಾಲಿನ ‘ಸಾಹಸ’ಕ್ಕೆ ಇಸ್ರೊ ಸಜ್ಜು: ಜ.1ರಂದು ‘ಎಕ್ಸ್‌ಪೊಸ್ಯಾಟ್’ ಉಡಾವಣೆ

ಪಿಟಿಐ
Published 30 ಡಿಸೆಂಬರ್ 2023, 16:21 IST
Last Updated 30 ಡಿಸೆಂಬರ್ 2023, 16:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2023ರಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಪದಾರ್ಪಣೆಯ ಬಳಿಕ ಭಾರತ, ಹೊಸ ವರ್ಷ 2024ರಲ್ಲಿ ಹೆಚ್ಚಿನ ಸವಾಲುಗಳ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆ ನಡೆಸಿದೆ.

ಅಂತರಿಕ್ಷಕ್ಕೆ ಮನುಷ್ಯರನ್ನು ಕಳುಹಿಸುವುದು, ಸೂರ್ಯನ ಅಂಗಳದಿಂದ ಅಧ್ಯಯನಕ್ಕಾಗಿ ಮಾದರಿಗಳನ್ನು ತರುವ ಯೋಜನೆಗಳ ಜಾರಿಗೆ ಈಗ ಸಿದ್ಧತೆ ನಡೆದಿದೆ. ಈ ಎರಡೂ ಯೋಜನೆಗಳ ಪ್ರಯೋಗಾರ್ಥ ಪರೀಕ್ಷೆಯು 2024ರಲ್ಲಿ ನಿಗದಿಯಾಗಿದೆ.

ಭಾರತೀಯ ವಿಜ್ಞಾನಿಗಳ ಸಂಶೋಧನೆ ಗುರಿ ಚಂದಿರ ಮತ್ತು ಸೂರ್ಯನ ಅಂಗಳಕ್ಕಷ್ಟೇ ಸೀಮಿತವಾಗಿಲ್ಲ. ಸಮುದ್ರದಾಳದ ಸಂಶೋಧನೆಗೂ ಒತ್ತು ನೀಡಿದ್ದು, ಸಮುದ್ರದಲ್ಲಿ 500 ಮೀಟರ್‌ ಆಳಕ್ಕೆ ಜಲಾಂತರ್ಗಾಮಿಗಳನ್ನು ಮಾರ್ಚ್‌ನಲ್ಲಿ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

ಎಕ್ಸ್‌–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯುವ ಉದ್ದೇಶದ ‘ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹ’ (ಎಕ್ಸ್‌ಪೊಸ್ಯಾಟ್) ಉಡಾವಣೆಯ ಮೂಲಕ ಹೊಸ ವರ್ಷವನ್ನು ಆರಂಭಿಸಲು ಈಗ ಇಸ್ರೊ ಸಜ್ಜಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ಜನವರಿ 1ರಂದು ಈ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಗಗನಕ್ಕೆ ಚಿಮ್ಮಲು ಸಜ್ಜಾಗಿದೆ. 

ಅದರ ಬಳಿಕ ಜನವರಿ 6ರಂದು ಸಂಜೆ 4ಗಂಟೆಗೆ ಸರಿಯಾಗಿ ಆದಿತ್ಯ ಎಲ್‌ –1 ಉಪಗ್ರಹವನ್ನು ಲಾಗ್ರೇಂಜ್‌ ಪಾಯಿಂಟ್‌–1ಕ್ಕೆ ತಲುಪಿಸುವ ಕಾರ್ಯ ನಡೆಯಲಿದೆ. ಈ ಪ್ರಕ್ರಿಯೆಯು ಮುಂದಿನ ಐದು ವರ್ಷ ಕಾಲ ಸೂರ್ಯನ ಅನಿಯಮಿತ ಅಧ್ಯಯನಕ್ಕೆ ನೆರವಾಗಲಿದೆ.

ಅಲ್ಲದೆ, 2024ರಲ್ಲಿ ನಾಸಾ ಮತ್ತು ಇಸ್ರೊ ಜಂಟಿಯಾಗಿ ಕಾರ್ಯಗತಗೊಳಿಸಲಿರುವ 1.2 ಬಿಲಿಯನ್‌ ಡಾಲರ್‌ ವೆಚ್ಚದ ನಿಸಾರ್ ಉಪಗ್ರಹ ಉಡಾವಣೆ ನಡೆಯಲಿದೆ. ತಾಪಮಾನ ಬದಲಾವಣೆ ಅಧ್ಯಯನ ಉದ್ದೇಶದ ಅತ್ಯಂತ ದುಬಾರಿ ಉಪಗ್ರಹ ಇದಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.