ನವದೆಹಲಿ: ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್–19 ಲಸಿಕೆ ವಿತರಣೆಯನ್ನು ಸಂಭ್ರಮಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ತನ್ನ 100 ಪಾರಂಪರಿಕ ಸ್ಮಾರಕಗಳನ್ನು ರಾಷ್ಟ್ರ ಧ್ವಜದ ಬಣ್ಣದಲ್ಲಿ ಬೆಳಗಿಸಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ತುಘಲಕಾಬಾದ್ ಕೋಟೆ, ಪುರಾನಾ ಕಿಲಾ, ಫತೇಪುರ್ ಸಿಕ್ರಿ, ರಾಮಪ್ಪ ದೇವಸ್ಥಾನ, ಹಂಪಿ, ಧೋಲವಿರಾ (ಗುಜರಾತ್), ಪುರಾತನ ಲೆಹ್ ಅರಮನೆ ಕೋಲ್ಕತ್ತಾದ ಕರೆನ್ಸಿ ಕಟ್ಟಡ ಮತ್ತು ಮೆಟ್ಕಾಲ್ಫ್ ಹಾಲ್; ಖಜುರಾಹೊ ದೇವಸ್ಥಾನಗಳು (ಎಂಪಿ), ಮತ್ತು ಹೈದರಾಬಾದ್‌ನ ಗೋಲ್ಕೊಂಡ ಕೋಟೆ ಸೇರಿದಂತೆ ಯುನೆಸ್ಕೊದ ಹದಿನೇಳು ಪಾರಂಪರಿಕ ತಾಣಗಳು ಸೇರಿ 100 ಸ್ಮಾರಕಗಳು ತ್ರಿವರ್ಣದಿಂದ ಪ್ರಕಾಶಿಸಲ್ಪಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಆರೋಗ್ಯ ವೃತ್ತಿಪರರು, ಮುಂಚೂಣಿಯ ಕಾರ್ಯಕರ್ತರು, ವಿಜ್ಞಾನಿಗಳು, ಲಸಿಕೆ ತಯಾರಕರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡಿದ ದೇಶದ ನಾಗರಿಕರಿಗೆ ನೀಡುತ್ತಿರುವ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ.
ಇದು ದೇಶದಾದ್ಯಂತ ಕೋವಿಡ್ ಲಸಿಕೆಯ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಆಯೋಜಿಸಿರುವ ಚಟುವಟಿಕೆಗಳ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಕೋವಿಡ್ -19 ಲಸಿಕೆ ಅಭಿಯಾನವು ಗುರುವಾರ 100 ಕೋಟಿ ಡೋಸ್ ಮೈಲಿಗಲ್ಲನ್ನು ದಾಟಿದೆ.
ಈ ಸಾಧನೆಗಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು ದೇಶದ ಜನರನ್ನು ಅಭಿನಂದಿಸಿದರು. ಇದು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಫಲಿತಾಂಶ ಎಂದು ಅವರು ಹೇಳಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ದೇಶದ ವಯಸ್ಕರಲ್ಲಿ ಶೇ 75ರಷ್ಟು ಜನರು ಮೊದಲ ಡೋಸ್ ಪಡೆದಿದ್ದರೆ, ಶೇ 31ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.