ಹುರಿಯತ್ ಮುಖ್ಯಸ್ಥ ಮೀರ್ವೈಜ್ ಉಮರ್ ಫಾರೂಕ್
(ಪಿಟಿಐ ಚಿತ್ರ)
ಶ್ರೀನಗರ: ಹುರಿಯತ್ ಮುಖ್ಯಸ್ಥ ಮೀರ್ವೈಜ್ ಉಮರ್ ಫಾರೂಕ್ ಅವರನ್ನು ಶುಕ್ರವಾರ ಗೃಹಬಂಧನದಲ್ಲಿ ಇರಿಸಲಾಗಿದ್ದು, ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀರ್ವೈಜ್ ಅವರನ್ನು ಶ್ರೀನಗರದ ನಿಜೀನ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಬಂಧನದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅವರ ಗೃಹಬಂಧನವನ್ನು ಜಾಮಿಯಾ ಮಸೀದಿಯ ಆಡಳಿತ ಮಂಡಳಿ ಅಂಜುಮನ್ ಔಕಾಫ್ ಖಂಡಿಸಿದೆ. ಪವಿತ್ರ ರಂಜಾನ್ ತಿಂಗಳು ಮುಸ್ಲಿಮರಿಗೆ ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ. ಅಧಿಕಾರಿಗಳ ಈ ಕ್ರಮವು ನ್ಯಾಯಸಮ್ಮತವಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
'ಮೀರ್ವೈಜ್ ಅವರು ಧಾರ್ಮಿಕ ಕರ್ತವ್ಯಗಳನ್ನು ಪೂರೈಸದಂತೆ ನಿರ್ಬಂಧಿಸುವುದು ಮತ್ತು ಅವರ ಧರ್ಮೋಪದೇಶಗಳಿಂದ ಭಕ್ತರು ಪ್ರಯೋಜನ ಪಡೆಯುವುದನ್ನು ತಡೆಯುವುದು ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಇಂತಹ ನಿರ್ಬಂಧಗಳು, ವಿಶೇಷವಾಗಿ ಪವಿತ್ರ ರಂಜಾನ್ ತಿಂಗಳಲ್ಲಿ ಅನಗತ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ತತ್ವಗಳಿಗೆ ವಿರುದ್ಧವಾಗಿವೆ' ಎಂದೂ ಅದು ಹೇಳಿದೆ.
ಮೀರ್ವೈಜ್ ಅವರು ತಮ್ಮ ಧಾರ್ಮಿಕ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗುವಂತೆ ಅವರನ್ನು ತಕ್ಷಣವೇ ಗೃಹಬಂಧನದಿಂದ ಬಿಡುಗಡೆ ಮಾಡಬೇಕೆಂದು ಔಕಾಫ್ ಒತ್ತಾಯಿಸಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ, ಭಯೋತ್ಪಾದನೆಗೆ ಬೆಂಬಲ ನೀಡಿದ, ಪ್ರತ್ಯೇಕತಾವಾದಿ ಭಾವನೆಗಳಿಗೆ ಪ್ರಚೋದನೆ ನೀಡಿದ ಆರೋಪದ ಅಡಿ ಕೇಂದ್ರ ಸರ್ಕಾರ ಇತ್ತೀಚೆಗೆ ಮೀರ್ವೈಜ್ ನೇತೃತ್ವದ ಅವಾಮಿ ಕ್ರಿಯಾ ಸಮಿತಿ (ಎಎಸಿ) ಮತ್ತು ಶಿಯಾ ಸಮುದಾಯದ ನಾಯಕ ಮಸ್ರೂರ್ ಅಬ್ಬಾಸ್ ಅನ್ಸಾರಿ ನೇತೃತ್ವದ ಜಮ್ಮು ಕಾಶ್ಮೀರ ಇತ್ತಿಹಾದುಲ್ ಮುಸ್ಲಿಮೀನ್ (ಜೆಕೆಐಎಂ) ಸಂಘಟನೆಗಳ ಮೇಲೆ 5 ವರ್ಷಗಳ ಕಾಲ ನಿಷೇಧ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.