ADVERTISEMENT

ಜಾರ್ಖಂಡ್ ಗುಂಪು ಹಲ್ಲೆ, ಹತ್ಯೆಗೆ ಬೇಸರ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ರಾಜ್ಯಸಭೆಯಲ್ಲಿ ಭಾಷಣ * ಕಾಂಗ್ರೆಸ್‌ಗೆ ತೀಕ್ಷ್ಣ ತಿರುಗೇಟು

ಏಜೆನ್ಸೀಸ್
Published 26 ಜೂನ್ 2019, 10:36 IST
Last Updated 26 ಜೂನ್ 2019, 10:36 IST
   

ನವದೆಹಲಿ:ಜಾರ್ಖಂಡ್‌ನಲ್ಲಿ ಇತ್ತೀಚೆಗೆ ನಡೆದ ಗುಂಪು ಹಲ್ಲೆ ಹಾಗೂ ಹತ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಜಾರ್ಖಂಡ್‌ನಲ್ಲಿ ನಡೆದ ಗುಂಪು ಹಲ್ಲೆ ಮತ್ತು ಹತ್ಯೆಯಿಂದ ಬೇಸರವಾಗಿದೆ. ಆದರೆ, ಈ ಕೃತ್ಯಕ್ಕೆ ಇಡೀ ರಾಜ್ಯವನ್ನು ದೂಷಿಸುವುದು ಸರಿಯಲ್ಲ’ ಎಂದು ಹೇಳಿದರು.

ಜೂನ್‌ 18ರಂದು ಜಾರ್ಖಂಡ್‌ನ ಖಾರ‍್ಸಾವಾನ್‌ನಲ್ಲಿತಬ್ರೇಜ್‌ ಅನ್ಸಾರಿ ಎಂಬುವವರ ಮೇಲೆ ಬೈಕ್‌ ಕಳವು ಮಾಡಿದ್ದಾರೆ ಎಂಬ ಗುಮಾನಿಯಿಂದ ಗುಂಪೊಂದು ತೀವ್ರ ಹಲ್ಲೆ ನಡೆಸಿತ್ತು.‘ಜೈ ಶ್ರೀರಾಂ’, ‘ಜೈ ಹನುಮಾನ್‌’ ಘೋಷಣೆ ಕೂಗುವಂತೆ ಹಲ್ಲೆ ನಡೆಸಿದ ಗುಂಪು ತಬ್ರೇಜ್‌ ಅವರನ್ನು ಒತ್ತಾಯಿಸಿತ್ತು. ಆ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.ತೀವ್ರವಾಗಿ ಗಾಯಗೊಂಡಿದ್ದ ತಬ್ರೇಜ್‌ ಘಟನೆ ನಡೆದು ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದರು. ಘಟನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಕಾಂಗ್ರೆಸ್ ವಿರುದ್ಧ ಗುಡುಗು:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ಗೆ ಮೋದಿ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ.

‘ಬಿಜೆಪಿ ಗೆಲುವಿನೊಂದಿಗೆ ದೇಶ ಮತ್ತು ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಸೋತಿತು’ ಎಂಬ ಕಾಂಗ್ರೆಸ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ, ‘ವಯನಾಡ್‌ನಲ್ಲಿ ಭಾರತ ಸೋತಿತೇ? ರಾಯ್‌ಬರೇಲಿಯಲ್ಲಿ ಭಾರತ ಸೋತಿತೇ? ಇದ್ಯಾವ ರೀತಿಯ ವಾದ? ಕಾಂಗ್ರೆಸ್ ಸೋತಿತು ಎಂದ ಮಾತ್ರಕ್ಕೆ ಭಾರತ ಸೋತಿತು ಎಂದು ಅರ್ಥವೇ? ಅಹಂಕಾರಕ್ಕೂ ಒಂದು ಮಿತಿಯಿರಬೇಕು. 17 ರಾಜ್ಯಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.