ADVERTISEMENT

ದ್ವೇಷ ಹರಡಲು ವಿಭಜಕ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ: ಕೆಸಿಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2022, 2:32 IST
Last Updated 26 ಆಗಸ್ಟ್ 2022, 2:32 IST
   

ಹೈದರಾಬಾದ್: ಶಾಂತಿಯುತ ರಾಜ್ಯದಲ್ಲಿ ದ್ವೇಷ ಹರಡಲು ವಿಭಜಕ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲವೆಂದುತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಗುರುವಾರ ಹೇಳಿದ್ದಾರೆ.

ಬದುಕಿರುವವರೆಗೂ ತೆಲಂಗಾಣದ ಶಾಂತಿಯನ್ನು ನಾಶವಾಗಲು ಬಿಡುವುದಿಲ್ಲ. ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳಿಂದ ರಾಜ್ಯಗಳನ್ನು ರಕ್ಷಿಸಬೇಕಿದೆ ಎಂದುಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ರಾಜ್ಯದಲ್ಲಿ ಸಾಧಿಸಿದ ಎಲ್ಲಾ ಪ್ರಗತಿಯನ್ನು ಧಾರ್ಮಿಕ ದ್ವೇಷ ನಾಶಮಾಡುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಕೆಸಿಆರ್‌, ‘ಮತಾಂಧ ಶಕ್ತಿಗಳನ್ನು ಓಡಿಸಬೇಕು. ಇಲ್ಲದಿದ್ದರೆ, ನಾವೆಲ್ಲ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಇಂತಹ ಸಮಯದಲ್ಲಿ ಬುದ್ಧಿಜೀವಿಗಳು, ಕಲಾವಿದರು, ಯುವಕರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

‘ಶಾಂತಿ ಮತ್ತು ಒಗ್ಗಟ್ಟಿನಿಂದ ಮಾತ್ರ ಪ್ರಗತಿ ಸಾಧ್ಯ. ಅಸಹಿಷ್ಣುತೆ ಉಂಟಾದರೆ ಕರ್ಫ್ಯೂ, ಬಂದ್‌ಗಳಿಂದ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಕೆಸಿಆರ್‌ ಹೇಳಿದ್ದಾರೆ.

ಕರ್ನಾಟಕದ ಉದಾಹರಣೆಯನ್ನು ಉಲ್ಲೇಖಿಸಿರುವ ಅವರು, ‘ಹಿಜಾಬ್ ಮತ್ತು ಹಲಾಲ್ ವಿವಾದಗಳ ನಂತರ, ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಈಗ ಹಿಂದುಳಿದ ನಗರವಾಗಿದೆ’ ಎಂದು ತಿಳಿಸಿದ್ದಾರೆ.

‘ದೇಶದ ಅತ್ಯುನ್ನತ ಹುದ್ದೆಯಲ್ಲಿ ಕುಳಿತಿರುವ ಪ್ರಧಾನಿ ಮೋದಿ ಸಂತೋಷವಾಗಿಲ್ಲವೇ? ಅವರಿಗೆ ಇನ್ನೇನು ಬೇಕು? ಶಾಂತಿಯುತ ತೆಲಂಗಾಣದಲ್ಲಿ ಏಕೆ ಅಗ್ಗದ ರಾಜಕಾರಣ ಮಾಡುತ್ತಿದ್ದಾರೆ’ ಕೇಳಿದ್ದಾರೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಗಳನ್ನು ಉರುಳಿಸಲು ಮೋದಿ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.