ADVERTISEMENT

ಹೈದರ್‌ಪೋರಾ: ಕಟ್ಟಡ ಮಾಲೀಕನನ್ನು ಮಾನವ ಗುರಾಣಿಯಾಗಿ ಬಳಸಿದ್ದ ಉಗ್ರರು!

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 15:17 IST
Last Updated 28 ಡಿಸೆಂಬರ್ 2021, 15:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಇಲ್ಲಿನ ಹೈದರ್‌ಪೋರಾದಲ್ಲಿ ನ.15ರಂದು ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಹತ್ಯೆಯಾದ ಪ್ರಕರಣ ಕುರಿತು ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸ್‌ ವಿಶೇಷ ತನಿಖಾ ತಂಡವು(ಎಸ್‌ಐಟಿ), ಹತ್ಯೆಯಾದ ಕಟ್ಟಡ ಮಾಲೀಕನನ್ನು ಮಾನವ ಗುರಾಣಿಯಾಗಿ ವಿದೇಶಿ ಉಗ್ರ ಬಳಸಿಕೊಂಡಿದ್ದ ಎಂದು ತಿಳಿಸಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಟಿ ಡಿಐಜಿ ಸುಜಿತ್‌ಕುಮಾರ್‌ ಸಿಂಗ್‌, ‘ಉಗ್ರರು ಅಡಗಿದ್ದ ಕಟ್ಟಡದ ಮಾಲೀಕ ಅಲ್ತಾಫ್‌ ಭಟ್‌ ಅವರನ್ನು ವಿದೇಶಿ ಉಗ್ರ ಬಿಲಾಲ್‌ ಭಾಯ್‌ ಮಾನವ ಗುರಾಣಿಯನ್ನಾಗಿ ಬಳಸಿಕೊಂಡಿದ್ದ.ವಿದೇಶಿ ಉಗ್ರನ ಜತೆಯಿದ್ದ ಸ್ಥಳೀಯ ಯುವಕ ಅಮಿರ್‌ ಮಗ್ರೆ ಶ್ರೀನಗರದ ಜಾಮಲತ ದಾಳಿಯಲ್ಲಿ ಭಾಗಿಯಾಗಿದ್ದ ಎಂಬುದು ಸಿಸಿಟಿವಿ ದೃಶ್ಯ ಹಾಗೂ ಇತರೆ ಸಾಕ್ಷ್ಯಗಳಿಂದ ತಿಳಿದು ಬಂದಿದೆ. ಇದೇ ವೇಳೆ ಡಾ.ಮುದಾಸಿರ್‌ ಗುಲ್‌ ಅವರನ್ನು ಗಡಿಯಾಚೆಗಿನ ಸೂಚನೆ ಮೇರೆಗೆ ವಿದೇಶಿ ಉಗ್ರನೇ ಹತ್ಯೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

’ಕಟ್ಟಡದಲ್ಲಿ ಬಾಡಿಗೆಗೆ ಇದ್ದವರ ವಿವರ ಹಾಗೂ ಬಾಡಿಗೆ ಪಡೆಯುತ್ತಿದ್ದ ವಿಧಾನ ಕುರಿತು ಕಟ್ಟಡ ಮಾಲೀಕರ ಸಂಬಂಧಿಕರು ತನಿಖೆ ವೇಳೆ ಸಮರ್ಪಕ ಉತ್ತರ ನೀಡಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಘಟನಾ ಸ್ಥಳದಲ್ಲಿ ಎರಡು ಪಿಸ್ತೂಲ್‌, ನಾಲ್ಕು ನಿಯತಕಾಲಿಕೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಎಸ್‌ಐಟಿ ವಶಪಡಿಸಿಕೊಂಡಿತ್ತು. ಇದೇ ವೇಳೆ ಉಗ್ರರ ಎರಡು ಮೃತದೇಹ ಹಾಗೂ ಕಟ್ಟಡದ ಪ್ರವೇಶದ್ವಾರದಲ್ಲಿ ಕಟ್ಟಡ ಮಾಲೀಕನ ಪತ್ತೆಯಾಗಿತ್ತು’ ಎಂದು ಸುಜಿತ್‌ ಕುಮಾರ್‌ ಸಿಂಗ್‌ ತಿಳಿಸಿದರು.

ನ.15ರಂದು ಪೊಲೀಸ್‌, ಸೇನೆ ಹಾಗೂ ಸಿಆರ್‌ಪಿಎಫ್‌ ನಡೆಸಿದ ಎನ್‌ಕೌಂಟರ್‌ನಲ್ಲಿ ವಿದೇಶಿ ಉಗ್ರ ಬಿಲಾಲ್‌ ಭಾಯ್‌, ನಾಗರಿಕ ಅಲ್ತಾಫ್‌ ಭಟ್‌, ವೈದ್ಯ ಡಾ.ಮುದಾಸಿರ್‌ ಗುಲ್‌, ಉಗ್ರ ಸಹಚರ ಮೊಹಮ್ಮದ್‌ ಮಗ್ರೆ ಹತ್ಯೆಯಾಗಿದ್ದರು. ಈ ಘಟನೆಗೆ ಕಣಿವೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮ್ಯಾಜಿಸ್ಟ್ರಿಯಲ್‌ ತನಿಖೆಗೆ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.