ADVERTISEMENT

ಜಾರ್ಖಂಡ್‌ನಲ್ಲಿ ಐಟಿ ದಾಳಿ: ₹100 ಕೋಟಿ ದಾಖಲೆಯಿಲ್ಲದ ವಹಿವಾಟು ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2022, 10:23 IST
Last Updated 8 ನವೆಂಬರ್ 2022, 10:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಾರ್ಖಂಡ್‌ನಲ್ಲಿ ಆದಾಯ ತೆರಿಗೆ ಇಲಾಖೆ ಮಂಗಳವಾರವೂ ದಾಳಿ ಮುಂದುವರಿಸಿದ್ದು, ₹2 ಕೋಟಿ ನಗದು ವಶಕ್ಕೆ ಪಡೆದಿದೆ. ₹100 ಕೋಟಿಗೂ ಅಧಿಕ ಮೊತ್ತದ ದಾಖಲೆಯಿಲ್ಲದ ವಹಿವಾಟು ಮತ್ತು ಹೂಡಿಕೆ ಪತ್ತೆಯಾಗಿರುವುದಾಗಿ ಇಲಾಖೆ ಹೇಳಿದೆ.

ಇಬ್ಬರು ಕಾಂಗ್ರೆಸ್‌ ಶಾಸಕರು ಮತ್ತು ಕೆಲ ವರ್ತಕರಿಗೆ ಸಂಬಂಧಿತ ಉದ್ಯಮಗಳ ಮೇಲೆ ಕೇಂದ್ರದ ನೇರ ತೆರಿಗೆ ಇಲಾಖೆ ಸೋಮವಾರ ದಾಳಿ ನಡೆಸಿತ್ತು. ಈ ಸಮೂಹಗಳು ನಾನಾ ರೀತಿಯಲ್ಲಿ ತೆರಿಗೆ ವಂಚನೆಯಲ್ಲಿ ತೊಡಗಿಕೊಂಡಿವೆ ಎಂದು ಆರೋಪಿಸಿತ್ತು.

ಕಲ್ಲಿದ್ದಲು ವಹಿವಾಟು, ಸಾರಿಗೆ, ಸರ್ಕಾರಿ ಗುತ್ತಿಗೆ, ಉಕ್ಕು ಸಂಬಂಧಿತ ಉದ್ಯಮ ಹಾಗೂ ಇಬ್ಬರು ರಾಜಕೀಯ ನಾಯಕರು ಮತ್ತು ಅವರ ಸಹವರ್ತಿಗಳಿಗೆ ಸಂಬಂಧಿತ ಉದ್ಯಮಗಳ ಮೇಲೆ ದಾಳಿ ನಡೆದಿದೆ. ಶೋಧ ಕಾರ್ಯಾಚರಣೆಯಿಂದ ಕೆಲ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಈ ಪುರಾವೆಗಳ ಪ್ರಾಥಮಿಕ ವಿಶ್ಲೇಷಣೆಯಿಂದ ಈ ಸಮೂಹಗಳು ತೆರಿಗೆ ವಂಚನೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ನಗದು ರೂಪದಲ್ಲಿ, ಸಾಲ ವಹಿವಾಟುಗಳು, ಪಾವತಿಗಳು / ರಶೀದಿಗಳು ಮತ್ತು ಉತ್ಪಾದನೆ ಸುಳ್ಳು ಲೆಕ್ಕ ಸೇರಿದಂತೆ ತೆರಿಗೆ ವಂಚನೆಯ ವಿವಿಧ ವಿಧಾನಗಳನ್ನು ಆಶ್ರಯಿಸಿವೆ ಎಂದು ತಿಳಿಸಿದೆ.

ಕಾಂಗ್ರೆಸ್‌ ಶಾಸಕರಾದ ಜೈಮಂಗಲ್‌ ಸಿಂಗ್‌ ಮತ್ತು ಪ್ರದೀಪ್‌ ಯಾದವ್‌ ಅವರಿಗೆ ಸಂಬಂಧಿಸಿದ ಉದ್ಯಮಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಶಾಸಕ ಜೈಮಂಗಲ್‌ ಸಿಂಗ್‌ ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.