
ಶಶಿ ತರೂರ್–ಪಿಟಿಐ ಚಿತ್ರ
ತಿರುವನಂತಪುರಂ: ‘ಬಿಹಾರ ವಿಧಾನಸಭೆ ಚುನಾವಣೆಯ ಪಕ್ಷದ ಪರ ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ, ಹೀಗಾಗಿ ಪಕ್ಷದ ಹಿನ್ನಡೆಗೆ ಕಾರಣ ಏನು ಎಂಬುದನ್ನು ನಾನು ತಿಳಿಸಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್ ತಿಳಿಸಿದ್ದಾರೆ.
‘ಬಿಹಾರ ಚುನಾವಣಾ ಪ್ರಚಾರಕ್ಕೆ ನನ್ನನ್ನು ಕರೆದಿರಲಿಲ್ಲ. ನಾನು ಅಲ್ಲಿಗೆ ಹೋಗದ ಕಾರಣ, ವೈಯಕ್ತಿಕ ಅನುಭವದಿಂದ ಯಾವ ಕಾರಣಕ್ಕಾಗಿ ಹಿನ್ನಡೆ ಉಂಟಾಯಿತು ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷವು ಕಾರ್ಯಕ್ಷಮತೆಯನ್ನು ಗಂಭೀರವಾಗಿ ಪರಾಮರ್ಶಿಸಬೇಕು’ ಎಂದು ತಿಳಿಸಿದ್ದಾರೆ.
‘ಕಾಂಗ್ರೆಸ್‌ನ ಸಾಮರ್ಥ್ಯ ಹಾಗೂ ದೌರ್ಬಲ್ಯದ ಕುರಿತು ಗಂಭೀರವಾಗಿ ಚಿಂತಿಸಬೇಕು. ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಬೇಕು’ ಎಂದು ತರೂರ್ ಸಲಹೆ ನೀಡಿದ್ದಾರೆ.
‘ನೆಹರು ಕುಟುಂಬವನ್ನು ಟೀಕಿಸುವ ಮೊದಲು ಅವರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಹಸನ್ ತಿರುಗೇಟು ನೀಡಿದ್ದಾರೆ.
‘ನೆಹರು ಕುಟುಂಬದವರಿಂದಲೇ ತರೂರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಎಲ್ಲ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಅವರು ದೇಶ ಹಾಗೂ ಸಮಾಜಕ್ಕಾಗಿ ಒಂದು ಹನಿ ಬೆವರು ಕೂಡ ಸುರಿಸಿಲ್ಲ. ಪಕ್ಷವನ್ನು ಟೀಕಿಸುವ ಮೊದಲು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಎಂ.ಎಂ.ಹಸನ್ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.