ADVERTISEMENT

‘ಭೀಕರ ಶಬ್ಧ ಕೇಳಿ ಎಚ್ಚರಗೊಂಡೆವು’: ಜಮ್ಮುವಿನ ಬಾಂಬ್ ದಾಳಿಯಿಂದ ಸ್ಥಳೀಯರಿಗೆ ಆಘಾತ

ಪಿಟಿಐ
Published 28 ಜೂನ್ 2021, 4:08 IST
Last Updated 28 ಜೂನ್ 2021, 4:08 IST
ಜಮ್ಮುವಿನ ವಾಯುಪಡೆ ಕೇಂದ್ರದ ಹೊರಗಡೆ ನಿಂತಿರುವ ಭದ್ರತಾ ಸಿಬ್ಬಂದಿ: ಪಿಟಿಐ ಚಿತ್ರ
ಜಮ್ಮುವಿನ ವಾಯುಪಡೆ ಕೇಂದ್ರದ ಹೊರಗಡೆ ನಿಂತಿರುವ ಭದ್ರತಾ ಸಿಬ್ಬಂದಿ: ಪಿಟಿಐ ಚಿತ್ರ   

ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾನುವಾರ ಜಮ್ಮುವಿನ ವಾಯುಪಡೆ ಕೇಂದ್ರದ ಮೇಲೆ ಡ್ರೋನ್ ಬಳಸಿ ನಡೆಸಿದ ಬಾಂಬ್ ದಾಳಿಯಲ್ಲಿ ಹೊರಬಂದ ಭಯಾನಕ ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರು ವಾಯು‍ಪಡೆ ಅಧಿಕಾರಿಗಳು ಗಾಯಗೊಂಡಿದ್ದರು.

ಮೊದಲ ಬಾಂಬ್ ದಾಳಿಯು ಸತ್ವಾರಿ ಪ್ರದೇಶದಲ್ಲಿರುವ ವಿಮಾನ ನಿಲ್ದಾಣದ ಉನ್ನತ ಭದ್ರತಾ ತಾಂತ್ರಿಕ ಪ್ರದೇಶದ ವಾಯುಪಡೆಯ ಒಂದು ಅಂತಸ್ತಿನ ಕಟ್ಟಡದ ಮೇಲೆ ಆಗಿದ್ದು, ಸ್ಫೋಟದ ತೀವ್ರತೆಗೆ ಕಟ್ಟಡದ ಛಾವಣಿ ಹಾರಿಹೋಗಿದೆ. ಎರಡನೆ ದಾಳಿ ಹೊರಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಡುರಾತ್ರಿ 1.45ರ ಸುಮಾರಿಗೆ ಈ ದಾಳಿ ನಡೆದಿದ್ದು, ‘ಕೇಳಲು ಅಸಾಧ್ಯವಾದ ಭೀಕರ ಶಬ್ದ ನಮ್ಮ ಕಿವಿಗೆ ಬಡಿದಿದ್ದರಿಂದ ಎಚ್ಚರಗೊಂಡೆವು, ಆ ಶಬ್ಧ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ ಮತ್ತು ಇಲ್ಲಿನ ಜನರು ಆಘಾತಕ್ಕೊಳಗಾಗಿದ್ದಾರೆ’ಎಂದು ವಾಯುಪಡೆ ನಿಲ್ದಾಣದ ಸಮೀಪದಲ್ಲಿ ನೆಲೆಸಿರುವ ಇಂದ್ರಜಿತ್ ಸಿಂಗ್ ಹೇಳಿದರು.

ADVERTISEMENT

ಇದೇ ಮೊದಲ ಬಾರಿಗೆ ಈ ರೀತಿಯ ಶಬ್ಧ ನಮ್ಮ ಕಿವಿಗೆ ಬಿದ್ದಿದೆ. ಭಯಾನಕ ಶಬ್ಧ ಕೇಳಿ ಕರಣ್-ಬಾಗ್, ಗಡ್ಡಿಗರ್, ಬೋಹರ್‌ಕ್ಯಾಂಪ್ ಮತ್ತು ಸತ್ವಾರಿಯಂತಹ ಹಲವಾರು ಜನರು ಕೋವಿಡ್ ನಿರ್ಬಂಧಗಳ ಹೊರತಾಗಿಯೂ ವಾಯುಪಡೆಯ ನಿಲ್ದಾಣಕ್ಕೆ ಧಾವಿಸಿ ಬಂದಿದ್ದಾರೆ. ಬಳಿಕ, ಬಾಂಬ್ ದಾಳಿ ನಡೆದಿರುವುದು ತಿಳಿದುಬಂದಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕರು ಇದೇ ಮೊದಲ ಬಾರಿಗೆ ಬಾಂಬ್ ದಾಳಿಗೆ ಡ್ರೋನ್ ಬಳಸಿದ್ದಾರೆ.

‘ಟಿವಿಗಳಲ್ಲಿ ಬಾಂಬ್ ದಾಳಿಯ ಸುದ್ದಿ ಬರುತ್ತಿದ್ದಂತೆ ಬೆಳಿಗ್ಗೆ ಈ ಪ್ರದೇಶದಲ್ಲಿ ಭಯದ ವಾತಾವರಣವಿತ್ತು. ಅಂತಹ ಪ್ರಮುಖ ರಕ್ಷಣಾ ಕೇಂದ್ರದ ಮೇಲೆ ದಾಳಿ ನಡೆಯಬಹುದೆಂದು ನಾವು ಊಹಿಸಿರಿಲಿಲ್ಲ’ಎಂದು ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.