ನವದೆಹಲಿ: 2026ರ ಮಾರ್ಚ್ ವೇಳೆಗೆ ಭಾರತೀಯ ವಾಯುಪಡೆಗೆ ಕನಿಷ್ಠ ಅರ್ಧ ಡಜನ್ ತೇಜಸ್ ಲಘು ಯುದ್ಧ ವಿಮಾನಗಳು ಲಭ್ಯವಾಗಲಿವೆ ಎಂದು ಅತ್ಯಾಧುನಿಕ ಫೈಟರ್ ಜೆಟ್‌ಗಳನ್ನು ತಯಾರಿಸುತ್ತಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ(ಎಚ್ಎಎಲ್) ಮುಖ್ಯಸ್ಥರು ಹೇಳಿದ್ದಾರೆ.
ಜಿಇ ಏರೋಸ್ಪೇಸ್‌ನಿಂದ ಎಂಜಿನ್‌ಗಳ ಪೂರೈಕೆ ತಡವಾಗಿರುವುದರಿಂದ ಜೆಟ್‌ಗಳ ವಿತರಣೆ ವಿಳಂಬಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ಎಲ್‌ಸಿಎ ಎಂಕೆ-1ಎ ಜೆಟ್‌ನ ಸರಬರಾಜು ವಿಳಂಬದ ಕುರಿತಂತೆ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.
ಅಮೆರಿಕ ಸಂಸ್ಥೆಯು ಎಫ್ 404 ಎಂಜಿನ್‌ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸದ ಹಿನ್ನೆಲೆಯಲ್ಲಿ ಈ ವಿಳಂಬ ಉಂಟಾಗಿದೆ ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಸುನಿಲ್ ಅವರು ಹೇಳಿದ್ದಾರೆ.
ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಇ ಏರೋಸ್ಪೇಸ್ 12 ಎಂಜಿನ್‌ಗಳನ್ನು ಪೂರೈಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಇದು ಐಎಎಫ್‌ಗೆ ಜೆಟ್‌ಗಳ ವಿತರಣೆಯನ್ನು ಸುಗಮಗೊಳಿಸುತ್ತದೆ ಎಂದಿದ್ದಾರೆ.
ಪ್ರತಿಯೊಂದು ಕಂಪನಿಯು ಟೀಕೆಗಳನ್ನು ಎದುರಿಸುತ್ತದೆ. ನಾವು ಆರು ಎಲ್‌ಸಿಎ ವಿಮಾನಗಳನ್ನು ಸಿದ್ಧಪಡಿಸಿದ್ದೇವೆ. ಎಂಜಿನ್‌ಗಳು ಸಮಯಕ್ಕೆ ಸರಿಯಾಗಿ ಪೂರೈಕೆ ಆಗದ ಹಿನ್ನೆಲೆ ನಾವು ಟೀಕೆ ಎದುರಿಸಬೇಕಾಗಿದೆ ಎಂದಿದ್ದಾರೆ.
ಜಿಇ ಏರೋಸ್ಪೇಸ್‌ನಿಂದ ಎಂಜಿನ್ ವಿತರಣೆ ಆಗಿಲ್ಲ. 2023 ರಲ್ಲೇ ಅವರು ಎಂಜಿನ್‌ಗಳನ್ನು ತಲುಪಿಸಬೇಕಾಗಿತ್ತು. ಇಲ್ಲಿಯವರೆಗೆ, ನಮಗೆ ಕೇವಲ ಒಂದು ಎಂಜಿನ್ ಮಾತ್ರ ಸಿಕ್ಕಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಜಿಇ ಏರೋಸ್ಪೇಸ್‌ನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿದಿದೆ. 2026ರ ಮಾರ್ಚ್ ವೇಳೆಗೆ ಎಚ್‌ಎಎಲ್ 12 ಜೆಟ್ ಎಂಜಿನ್‌ಗಳನ್ನು ಸ್ವೀಕರಿಸಲಿದೆ ಎಂದು ಹೇಳಿದ್ದಾರೆ.
ಇಂದಿನವರೆಗೆ ಆರು ವಿಮಾನಗಳು ಸಿದ್ಧವಾಗಿವೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಮ್ಮ ಕಡೆಯಿಂದ ಯಾವುದೇ ವಿಳಂಬ ಆಗಿಲ್ಲ. ನಾವು ವಿಮಾನಗಳನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ಆರ್ಥಿಕ ವರ್ಷದ ಆರಂಭದ ಹೊತ್ತಿಗೆ ತಲುಪಿಸುತ್ತೇವೆ ಎಂದಿದ್ದಾರೆ.
ಜಿಇ ಏರೋಸ್ಪೇಸ್‌ನಿಂದ ಎಂಜಿನ್ ಪೂರೈಕೆಯ ಸ್ಥಿರ ಹರಿವು ಇದ್ದರೆ ಮುಂಬರುವ ವರ್ಷದಲ್ಲಿ 16 ಜೆಟ್‌ಗಳನ್ನು ಉತ್ಪಾದಿಸಲು ಎಚ್‌ಎಎಲ್ ಯೋಜಿಸಿದೆ.
2021ರ ಏಪ್ರಿಲ್ ತಿಂಗಳಲ್ಲಿ ವಾಯುಪಡೆಗೆ 83 ತೇಜಸ್ ಎಂಕೆ 1–ಎ ಜೆಟ್ ತಯಾರಿಕೆಗೆ ರಕ್ಷಣಾ ಸಚಿವಾಲಯ ಎಚ್‌ಎಲ್ ಜೊತೆ ₹48,000 ಒಪ್ಪಂದ ಮಾಡಿಕೊಂಡಿತ್ತು.
ಸಚಿವಾಲಯವು ಸುಮಾರು ₹67,000 ಕೋಟಿ ವೆಚ್ಚದಲ್ಲಿ 97 ಹೆಚ್ಚುವರಿ ಎಲ್‌ಸಿಎ ಎಂಕೆ-1ಎ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ.
ಸಿಂಗಲ್-ಎಂಜಿನನ್‌ನ ಎಂಕೆ -1ಎ ವಿಮಾನವು ವಾಯುಪಡೆಯ ಮಿಗ್-21 ಯುದ್ಧವಿಮಾನಗಳಿಗೆ ಪರ್ಯಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.