ನವದೆಹಲಿ: 1971ರ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನದ ಸೆರೆಯಿಂದ ಧೈರ್ಯದಿಂದ ಪಾರಾಗಿ ಬಂದಿದ್ದ ಭಾರತೀಯ ವಾಯು ಪಡೆಯ ಅನುಭವಿ, ಸಾಹಸಿ ನಿವೃತ್ತ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಪಾರುಲ್ಕರ್ ಅವರು ನಿಧನರಾಗಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
‘ಪಾರುಲ್ಕರ್ ಅವರು ಅತ್ಯಂತ ಚತುರ, ಸಾಹಸಿಯಾಗಿದ್ದರು. ಅವರ ನಿಧನಕ್ಕೆ ವಾಯುಪಡೆಯ ಎಲ್ಲ ಸಿಬ್ಬಂದಿಯೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ‘ ಎಂದು ‘ಎಕ್ಸ್’ನಲ್ಲಿ ಐಎಎಫ್ ಸ್ಮರಿಸಿಕೊಂಡಿದೆ.
1963ರಲ್ಲಿ ವಾಯುಪಡೆ ಸೇವೆಗೆ ಸೇರಿದ್ದ ಪಾರುಲ್ಕರ್, 1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದರು. ಅವರ ವಿಮಾನಕ್ಕೆ ಶತ್ರು ದಾಳಿ ನಡೆಸಿದಾಗ ಬಲಭುಜಕ್ಕೆ ಗಾಯವಾಗಿತ್ತು. ಆದರೂ ವಿಮಾನವನ್ನು ವಾಯುನೆಲೆಗೆ ವಾಪಾಸ್ ತಂದಿದ್ದರು.
1971ರ ಸಮರದ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅವರು ಯುದ್ಧ ಕೈದಿ ಎಂದು ಘೋಷಿಸಲ್ಪಟ್ಟಿದ್ದರು. ಆನಂತರ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪಾಕಿಸ್ತಾನ ಯುದ್ಧ ಕೈದಿಗಳ ಶಿಬಿರದಿಂದ ಪಾರಾಗಿ ಬಂದಿದ್ದರು ಎಂದು ವಾಯುಪಡೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.