ADVERTISEMENT

IAS ಅಧಿಕಾರಿ ದಂಪತಿಯ ಮನೆಜಗಳ ಬೀದಿಗೆ: ಎಫ್‌ಐಆರ್ ದಾಖಲಿಸಿದ ಪತ್ನಿ

ಪಿಟಿಐ
Published 11 ನವೆಂಬರ್ 2025, 11:18 IST
Last Updated 11 ನವೆಂಬರ್ 2025, 11:18 IST
   

ಜೈಪುರ: ಕೌಟುಂಬಿಕ ಹಿಂಸೆ, ದೈಹಿಕ ಹಲ್ಲೆ, ಅಕ್ರಮ ಬಂಧನ ಹಾಗೂ ತನಗೂ ಮತ್ತು ತನ್ನ ಕುಟುಂಬಕ್ಕೂ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ರಾಜಸ್ಥಾನದ ಐಎಎಸ್ ಅಧಿಕಾರಿ ಆಶೀಶ್ ಮೋದಿ ವಿರುದ್ಧ ಅವರ ಪತ್ನಿಯೂ ಆಗಿರುವ ಐಎಎಸ್ ಅಧಿಕಾರಿ ಭಾರತಿ ದೀಕ್ಷಿತ್ ಪ್ರಕರಣ ದಾಖಲಿಸಿದ್ದಾರೆ.

ಭಾರತಿ ದೀಕ್ಷಿತ್ ಅವರು ಆರ್ಥಿಕ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಆಶೀಶ್ ಮೋದಿ ಅವರು ಸಾಮಾಜಿಕ ನ್ಯಾಯ ಮತ್ತು ಭದ್ರತೆ ಇಲಾಖೆಯಲ್ಲಿ ನಿರ್ದೇಶಕರಾಗಿದ್ದಾರೆ. ಇವರಿಬ್ಬರೂ 2014ರ ತಂಡದ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಗಳಾಗಿದ್ದಾರೆ.

‘2014ರಲ್ಲಿ ತಮ್ಮ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ನಾನು ಭಾವನಾತ್ಮಕವಾಗಿ ದುರ್ಬಲಳಾಗಿದ್ದೆ. ಆ ಸಮಯವನ್ನು ಬಳಸಿಕೊಂಡ ಆಶೀಶ್‌ ನನ್ನನ್ನು ವಿವಾಹವಾಗುವಂತೆ ಒತ್ತಡ ಹೇರಿದರು. ಆದರೆ ಅವರ ಕುರಿತ ಮಾಹಿತಿಯನ್ನು ಮರೆಮಾಚಿದರು. ನಂತರ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಭಾರತಿ ಆರೋಪಿಸಿದ್ದಾರೆ.

ADVERTISEMENT

‘ನಿರಂತರ ಮದ್ಯ ಸೇವಿಸುತ್ತಾರೆ. ಅಪರಾಧ ಹಿನ್ನೆಲೆಯುಳ್ಳವರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರ ವರ್ತನೆ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. 2018ರಲ್ಲಿ ನಮಗೆ ಮಗಳು ಜನಿಸಿದಳು. ನಂತರ ಇವರ ಹಿಂಸಾಚಾರ ಇನ್ನಷ್ಟು ಹೆಚ್ಚಾಯಿತು. ಜೈಪುರವನ್ನು ತೊರೆಯುವಂತೆ ಬಲವಂತ ಮಾಡಿದರು. ಆದರೆ ನನ್ನ ಹೆರಿಗೆ ರಜೆ ಪೂರ್ಣಗೊಂಡ ನಂತರ ಮರಳಿದೆ’ ಎಂದಿದ್ದಾರೆ.

‘2025ರ ಅಕ್ಟೋಬರ್‌ನಲ್ಲಿ ಆಶೀಶ್ ಮೋದಿ ಮತ್ತು ಅವರ ಸಹವರ್ತಿಯೊಬ್ಬರು ಸರ್ಕಾರಿ ವಾಹನದಲ್ಲಿ ನನ್ನನ್ನು ಕೂಡಿಹಾಕಿದರು. ವಿಚ್ಛೇದನ ನೀಡದಿದ್ದರೆ ನನ್ನನ್ನು ಹಾಗೂ ಪಾಲಕರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದರು. ತಲೆಗೆ ಬಂದೂಕು ಇಟ್ಟು ತಂದೆಯೊಡನೆ ಮಾತನಾಡಲು ಸೂಚಿಸಿದರು. ಅಲ್ಲಿ ಸುಳ್ಳು ಮಾಹಿತಿ ನೀಡಲು ಒತ್ತಾಯಿಸಿದರು’ ಎಂದು ಭಾರತಿ ಅವರು ದೂರಿನಲ್ಲಿ ಹೇಳಿದ್ದಾರೆ.

‘ತನ್ನ ಕೊಠಡಿಯಲ್ಲಿ ಅಕ್ರಮವಾಗಿ ಗುಪ್ತ ಕ್ಯಾಮೆರಾ ಇಟ್ಟಿದ್ದ ಮೋದಿ, ಅದನ್ನು ತಮ್ಮ ಮೊಬೈಲ್‌ಗೆ ಹೊಂದಿಸಿಕೊಂಡಿದ್ದರು. ನನ್ನ ಮೊಬೈಲ್ ಹ್ಯಾಕ್ ಮಾಡಿ, ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆಯುತ್ತಿದ್ದರು. ಐಎಎಸ್‌ ಅಧಿಕಾರಿಯಾದ ಮೋದಿ ಅವರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ತಮ್ಮ ವೈಯಕ್ತಿಕ ಮತ್ತು ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದಾರೆ’ ಎಂದು ಭಾರತಿ ಅವರು ನೇರ ಆರೋಪ ಮಾಡಿದ್ದಾರೆ.

ದೂರಿನಲ್ಲಿ ಆಶೀಶ್ ಮೋದಿ ಅವರೊಂದಿಗೆ ಸುರೇಂದ್ರ ವಿಷ್ಣೋಯಿ ಮತ್ತು ಆಶೀಶ್ ಶರ್ಮಾ ಅವರ ಹೆಸರನ್ನೂ ಭಾರತಿ ಉಲ್ಲೇಖಿಸಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

ಪ್ರತಿಕ್ರಿಯೆಗಾಗಿ ಆಶೀಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಅವರ ಸಂಪರ್ಕ ಸಾಧ್ಯವಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.