ADVERTISEMENT

ಕೋವಿಡ್: ಜಿಲ್ಲೆಗಳಲ್ಲಿ ಸಾವಿನ ಲೆಕ್ಕ ಮರುಪರಿಶೀಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 1:13 IST
Last Updated 14 ಜೂನ್ 2021, 1:13 IST
   

ನವದೆಹಲಿ: ಕೋವಿಡ್‌ನಿಂದ ಮೃತರಾದವರ ಲೆಕ್ಕಾಚಾರದಲ್ಲಿ ಏರುಪೇರಾಗಿರುವ ಕುರಿತು ಗೊಂದಲ ಉಂಟಾಗಿದ್ದು, ಪ್ರತಿಯೊಂದು ಸಾವಿನ ಲೆಕ್ಕಪರಿಶೋಧನೆ ಆಗಬೇಕು ಎಂದು ಎಲ್ಲ ಜಿಲ್ಲಾಡಳಿತಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಸೂಚನೆ ನೀಡಿದೆ.

ಸಾವಿನ ಲೆಕ್ಕಪರಿಶೋಧನೆಯಿಂದ ಸಮುದಾಯ ಮತ್ತು ಆಸ್ಪತ್ರೆಯ ಮಟ್ಟದಲ್ಲಿ ತಡೆಗಟ್ಟಬಹುದಾಗಿದ್ದ ಸಾವಿನ ಕಾರಣಗಳನ್ನು ಗುರುತಿಸಬಹುದು. ಅಲ್ಲದೇ ಆಂಬ್ಯುಲೆನ್ಸ್‌ಗಳ ಲಭ್ಯತೆ ಮತ್ತು ಚಿಕಿತ್ಸೆಯಲ್ಲಿನ ನ್ಯೂನತೆಗಳನ್ನು ಸಹ ತಿಳಿಬಹುದು ಎಂದು ವರದಿ ತಿಳಿಸಿದೆ.

ಪಟ್ನಾ ಹೈಕೋರ್ಟ್‌ನ ಸೂಚನೆಯ ಮೇರೆಗೆ ಪ್ರತಿ ಜಿಲ್ಲೆಯಲ್ಲೂ ಸಾವಿನ ಲೆಕ್ಕಪರಿಶೋಧನೆ ನಡೆಸಿದ್ದ ಬಿಹಾರದಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿತ್ತು. ಇದೇ ಸಮಯದಲ್ಲಿ ಚೆನ್ನೈನಲ್ಲಿರುವ ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಸಿದ್ಧಪಡಿಸಿದ ವರದಿಯೂ ಪ್ರಕಟವಾಗಿದೆ.

ADVERTISEMENT

ಕಳೆದ ಮೂರು ದಿನಗಳಿಂದ, ಮಹಾರಾಷ್ಟ್ರವು ತನ್ನ ಕೋವಿಡ್ ಸಾವಿನ ಸಂಖ್ಯೆಗಳನ್ನು ಪರಿಷ್ಕರಿಸುತ್ತಿದೆ. ಕಳೆದ 72 ಗಂಟೆಗಳಲ್ಲಿ 6,490 ಕೋವಿಡ್ ಸಾವುಗಳನ್ನು ಪಟ್ಟಿಗೆ ಸೇರಿಸಿದೆ. ಮಧ್ಯಪ್ರದೇಶ ಮತ್ತು ಗುಜರಾತ್ ಮಂಡಿಸಿದ ಅಧಿಕೃತ ಕೋವಿಡ್-19 ಸಾವಿನ ಸಂಖ್ಯೆಯಲ್ಲಿ ಅನುಮಾನ ಮೂಡುತ್ತಿರುವ ವರದಿಗಳಿವೆ.

ಕಡಿಮೆ ಸಂಖ್ಯೆಯ ದೈನಂದಿನ ಸಾವುಗಳನ್ನು ನಿರಂತರವಾಗಿ ವರದಿ ಮಾಡುವ ರಾಜ್ಯಗಳು ತಮ್ಮ ದತ್ತಾಂಶವನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

‘ಕೋವಿಡ್‌ನಂತಹ ದೀರ್ಘಕಾಲದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸಗಳು ಆಗುವುದು ಸಾಮಾನ್ಯ. ಆದರೆ ಭಾರತದ ಕೋವಿಡ್‌ ನಿಯಂತ್ರಣ ವ್ಯವಸ್ಥೆಯಲ್ಲಿ ಡ್ಯಾಶ್‌ಬೋರ್ಡ್ ಅನುಪಸ್ಥಿತಿಯಿಂದ ಈ ರೀತಿ ಆಗಿದೆ. ಪ್ರತಿ ಜಿಲ್ಲೆಯು ಪ್ರತೀವಾರವೂ ಸಾವಿನ ಲೆಕ್ಕ ಹಾಕಬೇಕು. ಮೃತರ ಲಿಂಗ, ವಯಸ್ಸು, ಪ್ರದೇಶ ಮೊದಲಾದ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಬೇಕು’ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.