ADVERTISEMENT

ಶ್ರೀನಗರದ ಬೋಟ್‌ ಹೌಸ್‌ಗಳು ಮರೆಯಾಗುವ ಆತಂಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 23:15 IST
Last Updated 13 ಏಪ್ರಿಲ್ 2023, 23:15 IST
ದಾಲ್‌ ಸರೋವರದಲ್ಲಿ ದುರಸ್ತಿಗೆ ಕಾದುನಿಂತಿರುವ ಬೋಟ್‌ಹೌಸ್‌ಗಳು
ದಾಲ್‌ ಸರೋವರದಲ್ಲಿ ದುರಸ್ತಿಗೆ ಕಾದುನಿಂತಿರುವ ಬೋಟ್‌ಹೌಸ್‌ಗಳು   

ಕಾಶ್ಮೀರದ ಆಕರ್ಷಣೆಗಳಲ್ಲಿ ಒಂದಾದ ‘ಬೋಟ್‌ಹೌಸ್‌’ಗಳು ಇತಿಹಾಸದ ಪುಟ ಸೇರುವ ಪರಿಸ್ಥಿತಿ ಎದುರಾಗಿದೆ. ಹೊಸ ಬೋಟ್‌ಹೌಸ್‌ಗಳ ನಿರ್ಮಾಣ ಮತ್ತು ಹಳೆಯ ಬೋಟ್‌ಹೌಸ್‌ಗಳ ದುರಸ್ತಿಗೆ ನಿರ್ಬಂಧ ಇರುವ ಕಾರಣ, ಈಗಿರುವ ದೋಣಿಗಳು ಮೂಲೆ ಸೇರುತ್ತಿವೆ. ಹೀಗಾಗಿ ಕೆಲವೇ ವರ್ಷಗಳಲ್ಲಿ ಇವು ನೆನಪು ಮಾತ್ರವಾಗಿ ಉಳಿಯಬಹುದು.

ಕಾಶ್ಮೀರದಲ್ಲಿ ಬೋಟ್‌ಹೌಸ್‌ಗಳ ಸಂಸ್ಕೃತಿ ಆರಂಭವಾದದ್ದು, ಬ್ರಿಟಿಷರ ಕಾಲದಲ್ಲಿ. ಬ್ರಿಟಿಷರು ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ಕಾಶ್ಮೀರಕ್ಕೆ ಬರುತ್ತಿದ್ದರು. ಆದರೆ, ಆಗ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇರಲಿಲ್ಲ ಮತ್ತು ಹೊರಗಿನವರು ಜಮೀನು ಖರೀದಿಸಿ, ಮನೆ ನಿರ್ಮಿಸಲು ಇಲ್ಲಿನ ರಾಜ ಅನುಮತಿ ನೀಡುತ್ತಿರಲಿಲ್ಲ. ಹೀಗಾಗಿ ಬೋಟ್‌ಹೌಸ್‌ಗಳನ್ನು ನಿರ್ಮಿಸಿ, ಅವುಗಳಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಣ್ಣ–ಬಣ್ಣದ, ಚಿತ್ತಾರದ ಈ ಬೋಟ್‌ಹೌಸ್‌ಗಳು ಅಂದಿನಿಂದ ಇಂದಿನವರೆಗೂ ಪ್ರವಾಸಿಗರ ಆಕರ್ಷಣೆಯಾಗಿ ಉಳಿದುಕೊಂಡು ಬಂದಿವೆ.

ಆದರೆ ಬೋಟ್‌ಹೌಸ್‌ಗಳ ಸಂಖ್ಯೆ ಹೆಚ್ಚಾಯಿತು ಎಂಬ ಸ್ಥಿತಿಯಯೇ ಅವುಗಳಿಗೆ ಮುಳುವಾಯಿತು. ಬೋಟ್‌ಹೌಸ್‌ ಸಂಸ್ಕೃತಿಯ ಉತ್ತುಂಗದ ಕಾಲದಲ್ಲಿ ದಾಲ್‌ ಮತ್ತು ನಿಗೀನ್‌ ಸರೋವರಗಳಲ್ಲಿ ಒಟ್ಟು 3,500 ಬೋಟ್‌ಹೌಸ್‌ಗಳಿದ್ದವು. ನಿರ್ವಹಣೆ ಮತ್ತು ದುರಸ್ತಿ ಇಲ್ಲದ ಕಾರಣ ಅವುಗಳ ಸಂಖ್ಯೆ ಈಗ 900ಕ್ಕೆ ಇಳಿದಿದೆ. ಹೊಸ ಬೋಟ್‌ಹೌಸ್‌ಗಳನ್ನು ನಿರ್ಮಿಸಬಾರದು ಎಂದು ಜಮ್ಮು–ಕಾಶ್ಮೀರ ಹೈಕೋರ್ಟ್‌ ನಿಷೇಧ ಹೇರಿದೆ. ಹೀಗಾಗಿ ಹೊಸ ಬೋಟ್‌ಹೌಸ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ.

ADVERTISEMENT

ಹಳೆಯ ಬೋಟ್‌ಹೌಸ್‌ಗಳ ದುರಸ್ತಿಗೂ ನಿರ್ಬಂಧವಿದೆ. ಈ ಬೋಟ್‌ಹೌಸ್‌ಗಳ ನಿರ್ಮಾಣಕ್ಕೆ ದೇವದಾರು ಮರಗಳನ್ನು ಬಳಸಲಾಗುತ್ತದೆ. ಈ ಮರಗಳು ನೀರಿನಲ್ಲಿದ್ದರೂ ದೀರ್ಘಕಾಲದವರೆಗೆ ಹಾಳಾಗದೇ ಇರುವ ಕಾರಣ, ಬೋಟ್‌ಹೌಸ್‌ಗಳ ನಿರ್ಮಾಣದಲ್ಲಿ ಅವನ್ನೇ ಬಳಸಲಾಗುತ್ತದೆ. ಈಗ ಈ ಮರಗಳು ಲಭ್ಯ ಇಲ್ಲ. ಲಭ್ಯವಿದ್ದರೂ ಅವುಗಳ ಬೆಲೆ ವಿಪರೀತ ಎನ್ನುವಷ್ಟಾಗಿದೆ. ಹೀಗಾಗಿ ಹಳೆಯ ಬೋಟ್‌ಹೌಸ್‌ಗಳ ದುರಸ್ತಿ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅವು ಮೂಲೆ ಸೇರುತ್ತಿವೆ.

ನಿರ್ಮಾಣಕ್ಕೆ ನಿಷೇಧ ಮತ್ತು ದುರಸ್ತಿಗೆ ನಿರ್ಬಂಧ ಇರುವ ಕಾರಣ ಬೋಟ್‌ಹೌಸ್‌ ನಿರ್ಮಾಣ ಕುಶಲಕರ್ಮಿಗಳಿಗೆ ಕೆಲಸ ಇಲ್ಲದಂತಾಗಿದೆ. ‘ನಾನು ಈ ಹಿಂದೆ 50ಕ್ಕೂ ಹೆಚ್ಚು ಬೋಟ್‌ಹೌಸ್‌ಗಳನ್ನು ನಿರ್ಮಿಸಿದ್ದೇನೆ. ನನ್ನ ಪೂರ್ವಜರೂ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅವರೆಂದೂ ಇಂತಹ ಸ್ಥಿತಿ ಎದುರಿಸಿರಲಿಲ್ಲ. ನನಗೆ ಈಗ ಕೆಲಸವೇ ಇಲ್ಲದಂತಾಗಿದೆ. ಶ್ರೀನಗರದಲ್ಲಿರುವ ಬೋಟ್‌ಹೌಸ್‌ಗಳಲ್ಲಿ ಶೇ 90ರಷ್ಟು ಬೋಸ್‌ಹೌಸ್‌ಗಳನ್ನು ತಕ್ಷಣವೇ ರಿಪೇರಿ ದುರಸ್ತಿ ಕುಶಲಕರ್ಮಿಗಳ ಸ್ಥಿತಿಯೂ ಇದೇ ರೀತಿ ಇದೆ.

ಕಾಶ್ಮೀರಿ ಬೋಸ್‌ಹೌಸ್‌ ಮಾಲೀಕರ ಪುನರ್ವಸತಿಗಾಗಿ ಒಂದು ನೀತಿಯನ್ನು ರೂಪಿಸಬೇಕು ಸಂಸದೀಯ ಸಮಿತಿಯು 2022ರ ಡಿಸೆಂಬರ್‌ನಲ್ಲಿ ಶಿಫಾರಸು ಮಾಡಿತ್ತು. ಜತೆಗೆ ಬೋಸ್‌ಹೌಸ್‌ಗಳ ದುರಸ್ತಿಗೆ ರಿಯಾಯಿತಿ ದರದಲ್ಲಿ ದೇವದಾರು ಮರಗಳನ್ನು ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ, ನಾಲ್ಕು ತಿಂಗಳು ಕಳೆದರೂ ಯಾವುದೇ ಪ್ರಗತಿ ಆಗಿಲ್ಲ. ದುರಸ್ತಿ ಎದುರು ನೋಡುತ್ತಿರುವ ಬೋಟ್‌ಹೌಸ್‌ಗಳು ದಾಲ್‌ ಮತ್ತು ನಿಗೀನ್‌ ಸರೋವರಗಳ ದಂಡೆಗಳಲ್ಲಿ ಲಂಗರು ಹಾಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.