ಲಂಡನ್: ಎಲ್ಲ ವ್ಯಾಪಾರ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕುವ ಮೂಲಕ ಸಕಾಲಕ್ಕೆ ಮಧ್ಯಪ್ರವೇಶಿಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ.
ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರೊಂದಿಗಿನ ಮಾತುಕತೆಗೂ ಮುನ್ನ ಸ್ಕಾಟ್ಲೆಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಜಗತ್ತಿನ ಆರು ಪ್ರಮುಖ ಯುದ್ಧಗಳನ್ನು ತಡೆಯಲಾಗಿದೆ’ ಎಂದಿದ್ದಾರೆ.
‘ಹಲವೆಡೆ ಕದನ ವಿರಾಮ ಘೋಷಿಸಲಾಗಿದೆ. ನಾನಿಲ್ಲದ್ದರೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧ ಇಂದಿಗೂ ಮುಂದುವರಿಯುತ್ತಿತ್ತು’ ಎಂದು ಪುನರುಚ್ಛರಿಸಿದ್ದಾರೆ.
‘ಭಾರತ ಹಾಗೂ ಪಾಕಿಸ್ತಾನದ ನಾಯಕರನ್ನು ಚೆನ್ನಾಗಿ ಬಲ್ಲೆ. ಅವರು ವ್ಯಾಪಾರ ಒಪ್ಪಂದಗಳ ಕುರಿತು ಚರ್ಚಿಸುತ್ತಿದ್ದಾರೆ. ಆದರೂ, ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದು ಹುಚ್ಚುತನವಾಗಿದೆ. ಹೀಗಾಗಿ, ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲವೆಂದು ಹೇಳಿದ್ದೆ. ಅವರಿಗೆ ವ್ಯಾಪಾರ ಒಪ್ಪಂದ ಅಗತ್ಯವಿತ್ತು. ನೀವು ಯುದ್ಧ ಮುಂದುವರಿಸಿದರೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೆ’ ಎಂದು ಟ್ರಂಪ್ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ’ದ ಬಳಿಕ ಕದನ ವಿರಾಮ ಘೋಷಿಸಲು ಯಾರ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ ಎಂದು ಭಾರತ ಪದೇ ಪದೇ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.