ADVERTISEMENT

ಆರ್‌ಜಿಎಫ್‌ ₹20 ಲಕ್ಷ ವಾಪಸ್‌ ನೀಡಿದರೆ ಚೀನಾ ಯಥಾಸ್ಥಿತಿ ಕಾಪಾಡಲಿದೆಯೇ: ಚಿದಂಬರಂ

ಪಿಟಿಐ
Published 27 ಜೂನ್ 2020, 8:19 IST
Last Updated 27 ಜೂನ್ 2020, 8:19 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ (ಆರ್‌ಜಿಎಫ್‌) ನೀಡಿರುವ ₹20 ಲಕ್ಷ ಹಿಂತಿರುಗಿಸಿದರೆ ಭಾರತದ ಭೂಪ್ರದೇಶದಿಂದ ತನ್ನ ಸೇನೆಯನ್ನು ಚೀನಾ ವಾಪಸ್‌ ಕರೆಯಿಸಿಕೊಳ್ಳಲಿದೆಯೇ ಮತ್ತು ಯಥಾಸ್ಥಿತಿ ಕಾಪಾಡಲಿದೆಯೇ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

‘ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಭರವಸೆ ನೀಡಲಿದ್ದಾರೆಯೇ’ ಎಂದು ಹೇಳಿದ್ದಾರೆ.

ರಾಜೀವ್‌ ಗಾಂಧಿ ಪ್ರತಿಷ್ಠಾನ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ‌ನಡ್ಡಾ ಮಾಡಿರುವ ಆರೋಪಗಳಿಗೆ ಚಿದಂಬರಂ ಈ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ನಡ್ಡಾ ಅವರು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದಾರೆ. ಸತ್ಯವನ್ನು ತಿರುಚಿ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿವೆ. ವಾಸ್ತವ ಸಂಗತಿಗಳನ್ನು ಮೊದಲು ಬಹಿರಂಗಪಡಿಸಿ. ಹಳೆಯ ದಿನಗಳಲ್ಲೇ ಕಳೆಯಬೇಡಿ’ ಎಂದಿದ್ದಾರೆ.

‘ಭಾರತದ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎನ್ನಲಾದ ಕುರಿತು ಕಾಂಗ್ರೆಸ್‌ ಕೇಳಿರುವ ಪ್ರಶ್ನೆಗೆ ಬಿಜೆಪಿ ಅಧ್ಯಕ್ಷರು ಮೊದಲು ಉತ್ತರಿಸಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಮೇ ಮತ್ತು ಜೂನ್‌ ತಿಂಗಳಲ್ಲಿನ ಗಾಲ್ವನ್‌ ಕಣಿವೆಯಲ್ಲಿ ಸೇನೆ ನಿಯೋಜನೆಯಾಗಿರುವ ಕುರಿತಾದ ಉಪಗ್ರಹ ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

‘ಭಾರತ ಮತ್ತು ಚೀನಾ ಗಡಿಯಲ್ಲಿ ಮೇ 22 ಮತ್ತು ಜೂನ್‌ 22ರ ಚಿತ್ರಗಳಲ್ಲಿನ ವ್ಯತ್ಯಾಸಗಳನ್ನು ಗಮನಿಸಿ’ ಎಂದು ಅವರು ಹೇಳಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್‌) ಹಣ ನೀಡಲಾಗಿತ್ತು ಎಂದು ನಡ್ಡಾ ಆರೋಪಿಸಿದ್ದರು.

ಈ ಆರೋಪದ ಬಗ್ಗೆ ಶುಕ್ರವಾರ ರಾತ್ರಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ್‌, ‘2004ರ ಅಂತ್ಯದಲ್ಲಿ ಸುನಾಮಿ ಸಂಭವಿಸಿತ್ತು. ಆಗ ಪಿಎಂಎನ್‌ಆರ್‌ಎಫ್‌ನಿಂದ ರಾಜೀವ್‌ ಗಾಂಧಿ ಪ್ರತಿಷ್ಠಾನ ₹20 ಲಕ್ಷ ಸ್ವೀಕರಿಸಿತ್ತು. ಈ ಹಣವನ್ನು ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಬಳಸಿಕೊಳ್ಳಲಾಗಿತ್ತು’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಚೀನಾ ರಾಯಭಾರ ಕಚೇರಿಯಿಂದ 2005ರಲ್ಲಿ ₹1.45 ಕೋಟಿಯನ್ನು ರಾಜೀವ್‌ ಗಾಂಧಿ ಪ್ರತಿಷ್ಠಾನ ಪಡೆಯಲಾಗಿತ್ತು. ಈ ಹಣವನ್ನು ಅಂಗವಿಕಲರ ಕಲ್ಯಾಣಕ್ಕೆ ಹಾಗೂ ಭಾರತ ಮತ್ತು ಚೀನಾ ಸಂಬಂಧಗಳ ಕುರಿತಾದ ಸಂಶೋಧನೆಗೆ ಬಳಸಲಾಗಿತ್ತು’ ಎಂದು ಸ್ಪಷ್ಟನೆ ನೀಡಿದ್ದರು.

‘ನಿರ್ದಿಷ್ಟ ಉದ್ದೇಶಕ್ಕೆ ಈ ಹಣವನ್ನು ಬಳಸಲಾಗಿದೆ ಮತ್ತು ಲೆಕ್ಕಪತ್ರದ ಪರಿಶೀಲನೆಯನ್ನು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಾನೂನುಬದ್ಧವಾಗಿ ಮಾಡಲಾಗಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.