ADVERTISEMENT

ಅಧಿಕಾರಿ ನೇಮಕ ಯಾವಾಗ: ದೆಹಲಿ ಹೈಕೋರ್ಟ್‌ ಪ್ರಶ್ನೆ

ಐಟಿ ನಿಯಮ ಪಾಲನೆ: ನಾಳೆಯೊಳಗೆ ಮಾಹಿತಿಗೆ ಸೂಚನೆ

ಪಿಟಿಐ
Published 6 ಜುಲೈ 2021, 22:08 IST
Last Updated 6 ಜುಲೈ 2021, 22:08 IST
ಟ್ವಿಟರ್–ಸಾಂದರ್ಭಿಕ ಚಿತ್ರ
ಟ್ವಿಟರ್–ಸಾಂದರ್ಭಿಕ ಚಿತ್ರ   

ನವದೆಹಲಿ: ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳ ಪ್ರಕಾರ, ಕುಂದುಕೊರತೆ ಅಧಿಕಾರಿಯನ್ನು (ಆರ್‌ಜಿಒ) ಯಾವಾಗ ನೇಮಕ ಮಾಡಿಕೊಳ್ಳಲಾಗುವುದು ಎಂಬ ಬಗ್ಗೆ ಗುರುವಾರದೊಳಗೆ (ಜುಲೈ 8) ಮಾಹಿತಿ ನೀಡುವಂತೆ ಟ್ವಿಟರ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಟ್ವಿಟರ್ ನೀಡಿದ ಹೇಳಿಕೆಗೆ ಹೈಕೋರ್ಟ್ ಈ ಪ್ರಶ್ನೆ ಕೇಳಿದೆ.

ತಾತ್ಕಾಲಿಕ ಆಧಾರದಲ್ಲಿ ಕುಂದುಕೊರತೆ ಅಧಿಕಾರಿ ನೇಮಕ ಮಾಡುವ ಮೂಲಕ ಟ್ವಿಟರ್‌ ಸಂಸ್ಥೆಯು ಕೋರ್ಟ್‌ಗೆ ತಪ್ಪು ಮಾಹಿತಿ ರವಾನಿಸಿದೆ ಎಂದು ಹೈಕೋರ್ಟ್ ಹೇಳಿತು.

‘ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಿದ ವಿಷಯವನ್ನು ಗಮನಕ್ಕೆ ತಂದಿದ್ದರೂ, ಆ ನೇಮಕಾತಿಯು ತಾತ್ಕಾಲಿಕ ಆಧಾರದಲ್ಲಿದೆ ಎಂಬ ಮಾಹಿತಿಯನ್ನು ನೀಡಿಲ್ಲ’ ಎಂದು ಕೋರ್ಟ್ ಹೇಳಿತು. ಅಧಿಕಾರಿಯು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂಬ ವಿಷಯವನ್ನು ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಉಲ್ಲೇಖಿಸಿದರು.

ADVERTISEMENT

‘ಅಧಿಕಾರಿಯು ಜೂನ್ 21ರಂದು ರಾಜೀನಾಮೆ ನೀಡಿದರೆ, 15 ದಿನಗಳಲ್ಲಿ ಇನ್ನೊಬ್ಬ ಅಧಿಕಾರಿಯನ್ನು ಟ್ವಿಟರ್‌ ನೇಮಿಸಬಹುದಿತ್ತು. ಏಕೆಂದರೆ, ಈ ವಿಷಯವು ಜುಲೈ 6ರಂದು ವಿಚಾರಣೆಗೆ ಬರಲಿದೆ ಎಂಬುದು ನಿಮಗೆ ತಿಳಿದಿತ್ತು. ಐ.ಟಿ. ನಿಯಮ ಪಾಲನೆ ವಿಷಯದಲ್ಲಿ ನಮಗೆ ಕಳವಳವಿದೆ. ನಿಮ್ಮ ಪ್ರಕ್ರಿಯೆಯು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಬಯಸಿದಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಟ್ವಿಟರ್ ಭಾವಿಸಿದರೆ, ನಾನು ಅದಕ್ಕೆ ಅನುಮತಿ ನೀಡುವುದಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಟ್ವಿಟರ್ ತೊಡಗಿದ್ದರೂ, ಇಲ್ಲಿಯವರೆಗೆ ನಿಯಮ ಪಾಲನೆ ಅಧಿಕಾರಿ, ಆರ್‌ಜಿಒ ಮತ್ತು ನೋಡಲ್ ಸಂಪರ್ಕ ವ್ಯಕ್ತಿ ಇಲ್ಲ ಎಂಬುದು ನಿಜ ಎಂದುಟ್ವಿಟರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ ತಿಳಿಸಿದರು.

‘ಹೌದು, ನ್ಯಾಯಾಲಯ ಹೇಳಿದಂತೆ, ಟ್ವಿಟರ್ ಸಂಸ್ಥೆಯು ನಿಯಮಗಳನ್ನು ಅನುಸರಿಸುತ್ತಿಲ್ಲ. ಆದರೆ ಅಧಿಕಾರಿಯನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಟ್ವಿಟರ್ ಸಂಸ್ಥೆಯು ನಿಯಮಗಳನ್ನು ಖಂಡಿತ ಅನುಸರಿಸುತ್ತದೆ. ದಯವಿಟ್ಟು ಒಂದಿಷ್ಟು ಸಮಯ ನೀಡಿ’ ಎಂದು ಪೂವಯ್ಯ ಮನವಿ ಮಾಡಿದರು.

ಫೆಬ್ರವರಿ 25ರಂದು ನಿಯಮಗಳನ್ನು ಪ್ರಕಟಿಸಲಾಗಿತ್ತು. ಅವುಗಳನ್ನು ಪಾಲಿಸಲು ಮೂರು ತಿಂಗಳ ಕಾಲಾವ
ಕಾಶ ನೀಡಲಾಗಿತ್ತು. ಇದು ಮೇ 25ಕ್ಕೆ ಮುಕ್ತಾಯಗೊಂಡಿದೆ ಎಂದು ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹೇಳಿದರು.

‘ಇಂದು ಜುಲೈ 6. ಅಂದರೆ 42 ದಿನ ಕಳೆದರ ಮೇಲೂ ನಿಯಮ ಪಾಲನೆ ಆಗಿಲ್ಲ. ಭಾರತದಲ್ಲಿ ವ್ಯಾಪಾರ ಮಾಡಲು ಅವರಿಗೆ ಸ್ವಾಗತವಿದೆ. ಆದರೆ ಇಲ್ಲಿನ ಕಾನೂನುಗಳಿಗೆ ಗೌರವ ಕೊಡದ ಈ ವರ್ತನೆ ಸರಿಯಲ್ಲ’ ಎಂದು ಅವರು ವಾದಿಸಿದರು.

ಬಾಕಿ ಅರ್ಜಿಗಳ ವರ್ಗಾವಣೆಗೆ ಮನವಿ
ಹೊಸ ಐಟಿ ನಿಯಮಗಳ ಸಿಂಧುತ್ವ ಪ್ರಶ್ನಿಸಿ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಹೊಸ ನಿಯಮಗಳ ಪ್ರಕಾರ, ಭಾರತದಲ್ಲಿ ದೂರು ಪರಿಹಾರ ವ್ಯವಸ್ಥೆಯನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಜಾರಿಗೆ ತರಬೇಕಾಗುತ್ತದೆ. ಕುಂದುಕೊರತೆ ಅಧಿಕಾರಿ ನೇಮಿಸಬೇಕಿದೆ. ಪ್ರತಿ ತಿಂಗಳು ದೂರು ಸ್ಪಂದನೆ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.