ADVERTISEMENT

‘ಮನ್‌ ಕಿ ಬಾತ್‌’ನಿಂದ ಹಲವು ಯೋಜನೆಗಳಿಗೆ ಜನಪ್ರಿಯತೆ: ಅಧ್ಯಯನ ವರದಿ

ಪಿಟಿಐ
Published 3 ಅಕ್ಟೋಬರ್ 2023, 16:31 IST
Last Updated 3 ಅಕ್ಟೋಬರ್ 2023, 16:31 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನ್‌ ಕಿ ಬಾತ್’ ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ಜನಪ್ರಿಯತೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಐಐಎಂ– ಬೆಂಗಳೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯ ಜಂಟಿಯಾಗಿ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಅಧ್ಯಯನದ ವರದಿಯನ್ನು ಮೋದಿ ಅವರು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ, ಮನ್‌ ಕಿ ಬಾತ್‌ ಕಾರ್ಯಕ್ರಮವು ಒಂಬತ್ತು ವರ್ಷಗಳನ್ನು ಪೂರೈಸಿರುವುದನ್ನೂ ಈ ಸಂದರ್ಭದಲ್ಲಿ ನೆನೆದಿದ್ದಾರೆ. ‘ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಕೆಲವು ವಿಷಯಗಳು ಮತ್ತು ಅವು ಬೀರಿದ ಸಾಮಾಜಿಕ ಪರಿಣಾಮವನ್ನು ಈ ಆಸಕ್ತಿಕರ ಅಧ್ಯಯನವು ಎತ್ತಿತೋರಿಸಿದೆ’ ಎಂದಿದ್ದಾರೆ.

ಒಂಬತ್ತು ವರ್ಷಗಳ 105 ಸಂಚಿಕೆಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಜೊತೆಗೆ ಆ ಸಂಚಿಕೆಗಳು ಜನರ ಮೇಲೆ ಬೀರಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮವನ್ನು ವಿಮರ್ಶೆಗೆ ಒಳಪಡಿಸಲಾಗಿದೆ ಎಂದು ಐಐಎಂ ಹೇಳಿದೆ.

ADVERTISEMENT

‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯನ್ನು ಕೇಂದ್ರ ಸರ್ಕಾರವು 2015ರ ಜನವರಿಯಲ್ಲಿ ಜಾರಿಗೆ ತಂದಿತು. ಅದೇ ತಿಂಗಳ ‘ಮನ್‌ ಕಿ ಬಾತ್‌’ ಕಾರ್ಯಕ್ರಮದ ಸಂಚಿಕೆಯಲ್ಲಿ ಮೋದಿ ಅವರು ಯೋಜನೆ ಕುರಿತು ಮಾತನಾಡಿದ್ದರು. ಆ ನಂತರ ಗೂಗಲ್‌ನಲ್ಲಿ ಈ ಯೋಜನೆ ಕುರಿತು ಹಲವು ಮಂದಿ ಹುಡುಕಾಡಿದ್ದರು. ಯೋಜನೆಯ ಭಾಗವಾಗಿದ್ದ ‘ಸುಕನ್ಯಾ ಸಮೃದ್ಧಿ ಯೋಜನೆ’ ಕೂಡಾ ಮನ್‌ ಕಿ ಬಾತ್‌ನಿಂದಾಗಿ ಹೆಚ್ಚು ಜನಪ್ರಿಯವಾಯಿತು ಎಂದು ಅಧ್ಯಯನ ತಿಳಿಸಿದೆ.

ಖಾದಿ ಉತ್ಪನ್ನದ ಜನಪ್ರಿಯತೆ ಹೆಚ್ಚಾಗಲೂ ‘ಮನ್‌ ಕಿ ಬಾತ್‌’ ಕೊಡುಗೆ ಇದೆ ಎಂದು ಅಧ್ಯಯನ ಹೇಳಿದೆ.

ಮುದ್ರಾ ಸಾಲ ಯೋಜನೆ, ಏಕತಾ ಪ್ರತಿಮೆ, ಸಿರಿಧಾನ್ಯ ಬಳಕೆ ಕುರಿತು ಮೋದಿ ಅವರು ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಬಳಿಕ ಅವುಗಳ ಜನಪ್ರಿಯತೆ ಹೆಚ್ಚಿದೆ.

ಕೋವಿಡ್‌– 19 ಸಾಂಕ್ರಾಮಿಕದ ಸಂದರ್ಭದಲ್ಲಿ, ‘ಸರಾಸರಿ ಕೋವಿಡ್‌ ಭೀತಿ ಸೂಚ್ಯಂಕ 2020–22’ ಭಾರತದಲ್ಲಿ ಅತ್ಯಂತ ಕಡಿಮೆ ದಾಖಲಾಗಿತ್ತು. ‘ಮನ್‌ ಕಿ ಬಾತ್‌’ ಮೂಲಕ ಮೋದಿ ಅವರು ಕೋವಿಡ್‌ ಕುರಿತು ಧೈರ್ಯ ತುಂಬುವ ಮಾತುಗಳನ್ನಾಡುತ್ತಿದ್ದರು ಎಂದು ತಿಳಿಸಿದೆ.

ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಮೋದಿ ಅವರು ಪ್ರಸ್ತಾಪಿಸಿದ್ದರು. ಆ ನಂತರ ವಿವೇಕಾನಂದ ಅವರ ಬಗ್ಗೆ ಗೂಗಲ್‌ ಹುಡುಕಾಟದ ಸರಾಸರಿಯು ಶೇ 25ರಷ್ಟು ಹೆಚ್ಚಾಗಿದ್ದು ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.